ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತೆಕ್ಕಟ್ಟೆ, ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‍ನಲ್ಲಿ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕ್ರತಿಕ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ಪತ್ರಕರ್ತ ಜಾನ್ ಡಿ’ಸೋಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಿ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಸ್ಪರ್ಧಿಗಳಷ್ಟೇ ಶ್ರೇಷ್ಟರೆಂದು ಭಾವಿಸಬಾರದು. ಅವರ ಗೆಲುವಿಗೆ ಕಾರಣರಾದ ಹಾಗೂ ಸಮಾನ ಸ್ಪರ್ಧೆಯನ್ನು ನೀಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸ ಬೇಕು. ಪ್ರತೀ ಸೋಲಿನಿಂದ ಗೆಲುವಿನ ದಾರಿಯನ್ನು ಕಂಡುಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಗಳಲ್ಲಿ ಧನಾತ್ಮಕ ಸ್ಪರ್ಧಾ ಮನೋ ಭಾವನೆ ಇರಬೇಕೆಂದು ಪ್ರತೀಯೊಬ್ಬ ವಿದ್ಯಾರ್ಥಿಯೂ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹೊಂದಿರುತ್ತಾರೆ, ಅದನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ದೊರೆತರೆ ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು.
ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಅವರು ಮಾತನಾಡಿ, ಜೀವನದಲ್ಲಿ ಸಾಧನೆ ಹಾಗೂ ಯಶಸ್ಸುಗಳಿಸಿದ ವ್ಯಕ್ತಿಗಳಿಂದ ವಿದ್ಯಾರ್ಥಿಗಳು ಪ್ರೇರಿತರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಮಾತನಾಡಿ ಬಹುಮಾನ ಎನ್ನುವುದು ಮುಂದಿನ ಸಾಧನೆಗೆ ದಾರಿಯಾಗಬೇಕು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ, ಶಿಕ್ಷಕರು, ಪೋಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಿಕ್ಷಕರಾದ ರವೀಂದ್ರ ಕೆ. ಸ್ವಾಗತಿಸಿ, ಸುಷ್ಮಾ ಆರ್ ನಿರೂಪಿಸಿ, ವಿನೋದ್ ವಂದಿಸಿದರು.