ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾ ಪ್ರಕಾರಗಳು ಮನುಷ್ಯನ ಬದುಕಿಗೆ ಸುಖ, ಸಂತೋಷ, ನೆಮ್ಮದಿಯನ್ನು ತಂದುಕೊಟ್ಟು ಆಯುಷ್ಯ ಮತ್ತು ಆರೋಗ್ಯವನ್ನು ವೃದ್ಧಿಸುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸುತ್ತಿರುವ ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಕುಂದಾಪುರದಲ್ಲಿ ಕಲಾಸಿರಿವಂತಿಕೆಯನ್ನು ಹಾಗೂ ಪ್ರೇಕ್ಷಕರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತಿದ್ದಾರೆ ಎಂದು ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹೇಳಿದರು.
ಅವರು ಕಲಾಕ್ಷೇತ್ರ ಕಛೇರಿಯಲ್ಲಿ ಇನಿದನಿ ಆಹ್ವಾನ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದರು. ಇನಿದನಿ ಎಂಬ ಸಂಗೀತ ಕಾರ್ಯಕ್ರಮವು ಕರಾವಳಿ ಜಿಲ್ಲೆಯಲ್ಲೇ ಅತೀದೊಡ್ಡ ಕಾರ್ಯಕ್ರಮವೆಂಬುವುದು ಕುಂದಾಪುರದವರಾದ ನಮಗೆ ಹೆಮ್ಮೆಯ ವಿಚಾರ ಜೊತೆಗೆ, ಯಕ್ಷಗಾನ ಭಾಗವತನಿಂದ ಇನಿದನಿಗೆ ಚಾಲನೆ ನೀಡಿರುವುದು ಅದು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಗೌರವವೆಂದು ನಾನು ಭಾವಿಸುತ್ತೇನೆ ಎಂದರು.
ಅತಿಥಿಯಾಗಿದ್ದ ಡಾ. ಚಿಂತನಾ ರಾಜೇಶ್ ಮಾತನಾಡಿ, ಮಕ್ಕಳಲ್ಲಿ ಹಲವು ಪ್ರತಿಭೆಗಳಿದ್ದರೂ ಅದನ್ನು ಗುರುತಿಸದೆ ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಅವರನ್ನು ಮುನ್ನುಗ್ಗುವಂತೆ ಒತ್ತಾಯಿಸುತ್ತಿರುವುದು ಇತೀಚೆಗೆ ಕಾಣುತ್ತಿದ್ದೇವೆ ಇದು ಸರಿಯಲ್ಲ. ಕಲೆ ಮತ್ತು ಸಂಸ್ಕೃತಿಗಳು ವಿದ್ಯಾಭ್ಯಾಸಕ್ಕೆ ಪೂರಕ. ಇದು ಮಕ್ಕಳ ಭವಿಷ್ಯತ್ತಿಗೆ ಪರಿಣಾಮಕಾರಿ.
ಇನಿದನಿ ಚಿತ್ರಿಕೆಯನ್ನು ಉದ್ಯಮಿ ಹಾಲಾಡಿ ಆದರ್ಶ ಶೆಟ್ಟಿ ಬಿಡುಗಡೆಗೊಳಿಸಿದರು. ಈ ವೇಳೆ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಕುಂದಾಪುರ ಉಪಸ್ಥಿತರಿದ್ದರು.
ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ರಾಜೇಶ್ ಕಾವೇರಿ ಸ್ವಾಗತಿಸಿ, ಶ್ರೀಧರ್ ಸುವರ್ಣ ವಂದಿಸಿದರು. ಕಾರ್ಯಾಲಯ ಕಾರ್ಯದರ್ಶಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.