ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಸೌಹಾರ್ದತೆಯಿಲ್ಲದೆ ಬದುಕಿಗೆ ಅರ್ಥವಿಲ್ಲ. ಪ್ರೀತಿ ಸೌಹಾರ್ದತೆಗಾಗಿ ನಾವು ಜೀವನದುದ್ದಕ್ಕೂ ಶ್ರಮಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಭಾಗಿತ್ವದಲ್ಲಿ ’30ನೇ ಆಳ್ವಾಸ್ ವಿರಾಸಾತ್’ ಅಂಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್- ರೇಂಜರ್ಸ್ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಬುಧವಾರ ಅವರು ಉಪನ್ಯಾಸ ನಿಡಿದರು.
ಜಾನಪದ ಕಲೆಗಳ ವೈವಿಧ್ಯತೆಯನ್ನು ವಿದ್ಯಾರ್ಥಿಗಳು ಅಪ್ಪಿಕೊಳ್ಳಬೇಕು. ದೇಶದ ಕಲೆಯನ್ನು ಪ್ರೀತಿಸಬೇಕು ಎಂದರು. ಶುಚಿತ್ವವನ್ನು ಬಿಟ್ಟರೆ ಬದುಕೇ ಇಲ್ಲ. ಶುಚಿತ್ವ ಕೇವಲ ಮಾತಿಗೆ, ಬರಹಕ್ಕೆ ಮೀಸಲಾಗಬಾರದು. ನಮ್ಮ ಜೀವನದಲ್ಲಿ ಅಂತರ್ಗತವಾಗಬೇಕು. ಇದರ ಜೊತೆಗೆ ಮಣ್ಣು ಗಾಳಿ ನೀರು ಆಕಾಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಈ ಅಂಶಗಳು ಮಾನವನ ಉಳಿವಿಗಿರುವ ಪ್ರಮುಖ ಅಂಶಗಳು. ಮಾನವ ಕುಲದ ರಕ್ಷಣೆಗೆ ಪರಿಸರದ ರಕ್ಷಣೆ ಬಹುಮುಖ್ಯ ಎಂದರು.
ಜೀವನದಲ್ಲಿ ಸೇವಾಮನೋಭಾವವನ್ನು ಬೇಕಿಸಿಕೊಳ್ಳಬೇಕು. ಕೇವಲ ಓದಿ ತಿಳಿಯುವುದಲ್ಲ ಜೀವನದ ಅನುಭವದ ಮೂಲಕ ತಿಳಿಯುವುದು ಎಂದು ತಿಳಿಸಿದರು.
ಮಾನವಧರ್ಮವನ್ನು ಹೊರತುಪಡಿಸಿ ಜಗತ್ತಿನಲ್ಲಿ ಯಾವುದೇ ಧರ್ಮವಿಲ್ಲ. ಧರ್ಮವೊಂದೇ, ಮತಗಳು ಹಲವಾರು ಎಲ್ಲಾ ಮತಗಳು ಸೇರಿ ಇರುವುದೇ ಧರ್ಮ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಮಾತನಾಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದೇಶಕ್ಕೆ ಮಾದರಿಯಾಗುವಂತೆ ಬೆಳೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವಪರಿಪೂರ್ಣತೆಯನ್ನು ಮೂಡಿಸುವ ಕೆಲಸವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ ಎಂದರು.
ಶಿಕ್ಷಣ, ಕ್ರೀಡೆ, ಸಂಸ್ಕೃತಿಯ ದೃಷ್ಟಿಯಲ್ಲಿ ದೇಶಕ್ಕೆ ಮಾದರಿಯಾಗಿರುವ ಏಕೈಕ ಸಂಸ್ಥೆ ಆಳ್ವಾಸ್ ಎಂದು ಶ್ಲಾಘಿಸಿದರು.
ಆಳ್ವಾಸ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ವಿರಾಸಾತ್ ಮೇಳಗಳನ್ನು ಪ್ರತಿಯೊಬ್ಬರೂ ಸೂಕ್ಷ್ಮತೆಯಿಂದ ಗಮನಿಸಿ, ಪ್ರೇರಿತರಾಗಬೇಕು ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನಚಂದ್ರ ಅಂಬೂರಿ ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜೂಜಾರೆ ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ಶ್ವೇತಾಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.