ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಟ್ಟಡ ರಚನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಮಂಜೂರಾದ 2 ಲಕ್ಷ ಸಹಾಯಧನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಕೊಡೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಯಿತು.
ಸಹಾಯಧನದ ಮಂಜೂರಾತಿ ಪತ್ರದ ವಿತರಣೆಯನ್ನು ಸಹಕಾರಿ ಧುರೀಣರು, ಸಹಕಾರ ರತ್ನ ಪ್ರಶಸ್ತಿ ವಿಜೇತರು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು,ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಪ್ರಕಾಶ್ ಚಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಇಲ್ಲದ ಕ್ಷೇತ್ರ ಇಲ್ಲ. ಹೈನುಗಾರಿಕಾ ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿರ್ಮಾಣಕ್ಕೆ ಮತ್ತು ಹೈನುಗಾರಿಕೆಗೆ ಅನೇಕ ರೀತಿಯಲ್ಲಿ ಅನುದಾನಗಳನ್ನ ನೀಡುತ್ತಾ ಹೈನುಗಾರಿಕೆಯನ್ನ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು ಬೀದರ್ ಜಿಲ್ಲೆಯ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಿದ್ದು, ಕ್ಷೀರ ಕ್ರಾಂತಿಯನ್ನು ಮಾಡಿದ್ದಾರೆ ಎಂದು ಪೂಜ್ಯರ ಸಾಮಾಜಿಕ ಕಳಕಳಿಯನ್ನು ಸ್ಲಾಘಿಸಿದರು. ಹೈನುಗಾರಿಕೆಯ ಅಭಿವೃದ್ಧಿಯಿಂದ ಜನರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದಾಗಿದೆ. ಇದರಿಂದ ಕೃಷಿ ಕ್ಷೆತ್ರವನ್ನು ಕೂಡ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಹೇಳಿದರು.

ಕಿರಿಮಂಜೇಶ್ವರ ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ವಿಜಯ್ ಕುಮಾರ ಶೆಟ್ಟಿ ಅವರು ಕೊಡೇರಿ ಭಾಗದಲ್ಲಿ ಉತ್ತಮ ಗುಣಮಟ್ಟದ ಹಾಲು ಹೆಚ್ಚಿನ ರೀತಿಯಲ್ಲಿ ಸಂಗ್ರಹವಾಗಲೆಂದು ಶುಭ ಹಾರೈಸಿದರು.
ತಾಲೂಕು ಯೋಜನಾಧಿಕಾರಿಗಳಾದ ವಿನಾಯಕ್ ಪೈ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ಮಾತಾಡಿದರು.
ಕಾರ್ಯಕ್ರಮದಲ್ಲಿ ಕಿರಿಮಂಜೇಶ್ವರ ವಲಯದ ಅಧ್ಯಕ್ಷರಾದ ಸುರೇಂದ್ರ ನಾಯ್ಕ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ರವಿ ಪೂಜಾರಿ, ದಿನೇಶ್ ಪೂಜಾರಿ, ಮೇಲ್ವಿಚಾರಕರಾದ ಭರತ್, ಕೊಡೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮೂಕಾಂಬು, ಕೊಡೇರಿ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಿ, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಮಮತಾ ಮತ್ತು ಕುಸುಮ, ಊರಿನ ಗಣ್ಯರು, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಸದಸ್ಯರು ಹೈನುಗಾರರು ಉಪಸಿತರಿದ್ದರು.















