ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ‘ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ’ ಎಂದು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಭಾವುಕರಾದರು.
ಇಲ್ಲಿನ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ’30ನೇ ವರ್ಷದ ಆಳ್ವಾಸ್ ವಿರಾಸತ್’ನಲ್ಲಿ ಪ್ರತಿಷ್ಠಿತ ’ಆಳ್ವಾಸ್ ವಿರಾಸತ್-2024’ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಮನದುಂಬಿ ಮಾತನಾಡಿದರು.
ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ ಡಾ.ಎಂ. ಮೋಹನ ಆಳ್ವ ಅವರ ಸಾಧನೆ ಅನನ್ಯ. ಅವರಿಂದ 101 ವರ್ಷ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು. ಇಂತಹ ಕಾರ್ಯಕ್ರಮ ಕಷ್ಟದ ಕಾರ್ಯ ಎಂದು ಉಲ್ಲೇಖಿಸಿದರು.
ತಂದೆ- ತಾಯಿಗಳ ಬಳಿಕ ಗುರುವೇ ನಮ್ಮ ಪುಣ್ಯ ಗವಾಯಿಗಳು ರಾಜ್ಯದಲ್ಲಿ ಹಿಂದೂಸ್ತಾನಿ ಸಂಗೀತ ಪಸರಿಸಲು ಕಾರಣ. ಅದಕ್ಕಾಗಿ ಜೀವನ ಮುಡುಪಾಗಿಟ್ಟ ಮಹಾತ್ಮ ಎಂದರು.
ಪ್ರಶಸ್ತಿ ಹುಡುಕಿಕೊಂಡು ಬರಬೇಕು. ನಾವು ಅದರ ಹಿಂದೆ ಹೋಗಬಾರದು ಎಂದು ಕಿವಿಮಾತು ಹೇಳಿದರು.
ಅದಕ್ಕೂ ಮೊದಲು, ಕಲೆ-ಸಂಸ್ಕೃತಿಯ ಸಮ್ಮಿಲನದ ಸ್ವರೂಪದಂತೆ ಅಲಂಕೃತ ಗೊಂಡ ವಿರಾಸತ್‌ನ ಬಯಲು ರಂಗಮಂದಿರದ ಬೃಹತ್ ವೇದಿಕೆಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರನ್ನು ಸಾಂಪ್ರದಾಯಿಕ ಗೌರವದ ಅಪ್ಸರೆಯರ ಜೊತೆಯಾದ ಸ್ಯಾಕ್ಸೋಫೋನ್, ಗಟ್ಟಿಮೇಳ, ಚೆಂಡೆ, ಛತ್ರಿ ಚಾಮರ ಮತ್ತಿತರ ಗೌರವ ವಾದ್ಯಪರಿಕರಗಳ ನಿನಾದಗಳ ಮೂಲಕ ಕರೆತರಲಾಯಿತು.
ವೇದಿಕೆಯ ಗೌರವ ಪೀಠದಲ್ಲಿ ಕುಳ್ಳಿರಿಸಿ, ಆರತಿ ಬೆಳಗಿ ಹಾರ ಹಾಕಿ ಗೌರವಿಸಲಾಯಿತು. ಹೂ, ಪನ್ನೀರು, ಗಂಧ, ಚಂದನದ ಮೂಲಕ ಸಾಂಪ್ರದಾಯಿಕ ಗೌರವ ನೀಡಲಾಯಿತು.
’ಸ ಎಂದರೆ ಸಂಗೀತ ಸಾಗರ. ಆರತಿಯು.ʼ ಹಾಡಿನ ಮೂಲಕ ಅಭಿವಂದನೆ ಸಲ್ಲಿಸಲಾಯಿತು. ಹೂ ಹಾರ, ಶಾಲು, ಹಣ್ಣು-ಹಂಪಲು, ಪ್ರಶಸ್ತಿ ಫಲಕ, ಸ್ಮರಣಿಕೆ ಸಹಿತ ಒಂದು ಲಕ್ಷ ರೂಪಾಯಿಯ ಪುರಸ್ಕಾರ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಆರಂಭದಲ್ಲಿ ದೀಪ ಪ್ರಜ್ವಲನ ಮಾಡಲಾಯಿತು. ಬೆಂಗಳೂರಿನ ಪ್ರಾರ್ಥನಾ ಶಿಕ್ಷಣ ಸಂಸ್ಥೆಯ ಕರ್ಣ ಬೆಳಗೆರೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ವಿಧಾನ ಪರಿ?ತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಎಲ್. ಎಚ್. ಮಂಜುನಾಥ್, ಪ್ರಮುಖರಾದ ನರೇಂದ್ರ ಎಲ್. ನಾಯಕ್, ಉದ್ಯಮಿ ಶ್ರೀಪತಿ ಭಟ್ ಇದ್ದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.