ಬೈಂದೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಪ್ರೀತಿ, ಸ್ನೇಹ, ಮಮತೆ ಎಲ್ಲವೂ ಸಿಗುತ್ತದೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ ಮಾಧ್ಯಮವಾಗಿದೆ. ಇಲ್ಲಿ ಕಲಾವಿದ ತನ್ನ ಕ್ರೀಯಾಶೀಲತೆಯನ್ನು ಬಳಸಿಕೊಂಡು ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬಹುದಾಗಿದೆ ಎಂದು ಹಿರಿಯ ರಂಗಕಲಾವಿದೆ ಗೀತಾ ಸುರತ್ಕಲ್ ಹೇಳಿದರು.
ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಬೈಂದೂರು ಸುರಭಿ ಸಂಸ್ಥೆ ಮೂರುದಿನಗಳ ಕಾಲ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಆಯೋಜಿಸಿದ ರಂಗಧ್ವನಿ-2015 ನಾಟಕೋತ್ಸವದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನನಗೆ ಸಿಕ್ಕಿದ ಈ ಸನ್ಮಾನ ನಮ್ಮ ತಂಡಕ್ಕೆ ಅರ್ಪಿಸುತ್ತಿದ್ದೇನೆ. ತುಂತುರು ಮಳೆಯನ್ನೂ ಲೆಕ್ಕೆಸದೇ ಪ್ರೇಕ್ಷಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೀರಿ ಎಂದು ಹರ್ಷವ್ಯಕ್ತಪಡಿಸಿದರು.
ನಂತರ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಮಾತನಾಡಿ, ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ದಿಷ್ಟವಾದ ಮಾನದಂಡದಿಂದ ಅಳೆಯಲು ಮುಂದಾಗಬಾರದು. ಪ್ರತಿ ವ್ಯಕ್ತಿಯಲ್ಲೂ ಅವರದ್ದೇ ಆದ ಪ್ರತಿಭೆ ಅಡಗಿರುತ್ತದೆ ಎಂದರು.
ಉಡುಪಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ದೇವಿದಾಸ್ ಪೈ ರಂಗಕಲಾವಿದೆ ಗೀತಾ ಸುರತ್ಕಲ್‌ರನ್ನು ಸನ್ಮಾನಿಸಿದರು. ಸುರಭಿ ಅಧ್ಯಕ್ಷ ಶಿರಾಮ ಕೊಠಾರಿ ಅಧ್ಯಕ್ಷತೆವಹಿಸಿದ್ದರು. ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಸುರಭಿ ಕಾರ್ಯದರ್ಶಿ ಲಕ್ಷಣ ವೈ. ಕೊರಗ, ವ್ಯವಸ್ಥಾಪಕ ಕೃಷ್ಣಮೂತಿ ಉಡುಪ ಉಪಸ್ಥಿತರಿದ್ದರು. ನಿರ್ದೇಶಕರಾದ ಗಣಪತಿ ಹೋಬಳಿದಾರ್ ಸ್ವಾಗತಿಸಿ, ಸುಧಾಕರ್ ಪಿ ವಂದಿಸಿದರು. ನಂತರ ಬೆಂಗಳೂರು ರಂಗಮಂಟಪ ತಂಡದ ಕಲಾವಿದರು ವೈದೇಹಿ ಕಥೆಗಳ ಆಧಾರಿತ ’ಅಕ್ಕು’ ನಾಟಕ ಪ್ರದರ್ಶಿಸಿದರು.