ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ಪಿ.ಯು.ಸಿ ಹಂತದಲ್ಲಿ ಮುಂದಿನ ವ್ಯಾಸಂಗದ ಆಯ್ಕೆಯ ಬಗ್ಗೆ ಗೊಂದಲ, ಅನಿಶ್ಚಿತತೆ ಸಹಜವಾಗಿರುವಂಥದ್ದು. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಸಿಸಿದರೆ ಕಡಿಮೆ ವೆಚ್ಚದಲ್ಲಿ ಮೆಡಿಕಲ್/ ಇಂಜಿನಿಯರಿಂಗ್ ಶಿಕ್ಷಣ ಪಡೆಯಬಹುದು. ಜ್ಞಾನ ಪಡೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾದರೆ ಹಣ ತಾನಾಗೇ ಬರುತ್ತದೆ. ನನ್ನ ಈ ಸಾಧನೆಗೆ ಆರ್. ಎನ್. ಎಸ್ ಕಾಲೇಜು ಪ್ರೇರಣೆ. ಇಲ್ಲಿನ ಉಪನ್ಯಾಸಕರ ಸತತ ಪ್ರೋತ್ಸಾಹದಿಂದ ನನ್ನ ಹಾಗೆ ಹಲವಾರು ವಿದ್ಯಾರ್ಥಿಗಳು ಇಂದು ಉತ್ತಮ ಸಾಧನೆ ಮಾಡಿದ್ದಾರೆ” ಎಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿರುವ ಡಾ. ಶ್ರೀಶಂಕರ್ ಬಾಯಿರಿ ಅವರು ಅಭಿಪ್ರಾಯಪಟ್ಟರು.
ಅವರು ಆರ್. ಎನ್.ಎಸ್ ವೈಭವ – ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ಬಿ.ಎಮ್ ಸುಕುಮಾರ ಶೆಟ್ಟಿ ಅವರು ಮಾತನಾಡಿ, ಯಶಸ್ಸಿನ ಹೊಸದಿಶೆಯತ್ತ ಸಾಗುತ್ತಿರುವ ಆರ್. ಎನ್. ಎಸ್ ಪಿ.ಯು ಕಾಲೇಜಿನ ಬಗ್ಗೆ ಆಶೋತ್ತರಗಳನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕುಂದಾಪುರದ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಭಾಂಡ್ಯ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಎಚ್.ಎಮ್.ಎಮ್ -ವಿ.ಕೆ.ಆರ್ ಸಂಸ್ಥೆಗಳ ಪ್ರಾಂಶುಪಾಲೆಯಾದ ಡಾ. ಚಿಂತನಾ ರಾಜೇಶ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಕ್ಷತಾ ಕೆ.ಎನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಾನೀಸ್ ನತಾಶಾ ಡಿಸೋಝಾ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಆಶ್ವಿನಿ ನಾಯಕ್ ಹಾಗೂ ಗಣಿತ ವಿಜ್ಞಾನದ ಉಪನ್ಯಾಸಕಿ ಶುಭಾ ಎಂ. ಜಿ. ಅವರು ವಿವಿಧ ವಿಭಾಗಗಳ ಬಹುಮಾನ ವಿತರಣಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು. ಸಿ ವಾಣಿಜ್ಯ ವಿಭಾಗದ ರಿಯಾ ಅತಿಥಿ ಪರಿಚಯ ಮಾಡಿದರು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಸುಚೇತಾ ಅವರು ಭರತನಾಟ್ಯ ಪ್ರದರ್ಶನ ನೀಡಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಹಿಂದಿ ಉಪನ್ಯಾಸಕಿ ಜಯಶೀಲಾ ಪೈ ಅವರು ಶೈಕ್ಷಣಿಕ ಮತ್ತು ಕ್ರೀಡಾ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಮೂರೂ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರ ಶಿಕ್ಷಕರಾಗಿದ್ದ ಶ್ರೀನಿವಾಸ ಸೋಮಯಾಜಿ ಅವರು ತಮ್ಮ ವಿದ್ಯಾರ್ಥಿನಿಯರ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೀತೇಶ್ ಶೆಟ್ಟಿ ಅವರು ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಕ್ಷಮಾ, ಗೌತಮ್, ಭುವನ್ ಎಸ್. ಹಾಗೂ ಸುನೀತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.