ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ವಿದ್ಯಾರ್ಥಿಗಳು ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಕೂಡ ಹೆಚ್ಚು ತೊಡಗಿಸಿಕೊಳ್ಳಬೇಕು. ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಆಗಿ ವಿದ್ಯಾರ್ಥಿ ಜೀವನ ಉಜ್ವಲವಾಗಲು ಸಹಾಯಕವಾಗುತ್ತದೆ. ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳಲ್ಲಿ ಅತ್ಯುತ್ತಮ ವಿದ್ಯಾಭ್ಯಾಸ ದೊರೆಯುತ್ತಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಕಾರ್ಯದರ್ಶಿ ಎಚ್. ಗಣೇಶ ಕಾಮತ್ ಹೇಳಿದರು.
ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶನಿವಾರ ಜರಗಿದ ಗಂಗೊಳ್ಳಿಯ ಸ. ವಿ. ಆಂಗ್ಲ ಮಾಧ್ಯಮ ಶಾಲೆಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವೇಕಾನಂದ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಹಳೆ ವಿದ್ಯಾರ್ಥಿ ಕಿರಣ್ ಎನ್. ಸ್ವಸ್ತಿ ವಾಚನಗೈದರು. ಮುಖ್ಯ ಅತಿಥಿಯಾಗಿದ್ದ ಸೌಭಾಗ್ಯಲಕ್ಷ್ಮೀ ವಿ. ಕಾಮತ್ ಬಹುಮಾನ ವಿತರಿಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಜಿ. ವಿಠಲ ಶೆಣೈ, ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಶುಭ ಹಾರೈಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟ, ಕನ್ನಡ ಮಾಧ್ಯಮ ಶಾಲೆಯ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ, ಶಾಲಾ ವಿದ್ಯಾರ್ಥಿ ನಾಯಕ ರಿತೇಶ್ ದೇವಾಡಿಗ ಉಪಸ್ಥಿತರಿದ್ದರು.
ಇದೇ ಸಂದರ್ಭ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ದೀಕ್ಷಾ ವಿ.ಕಾಮತ್ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಾರ್ಥನಾ ಪೈ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಆರ್ಯನ್ ವಿ.ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ ನಾಯಕ್ ಸ್ವಾಗತಿಸಿದರು. ಸಂಚಾಲಕ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.. ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಪ್ರಥ್ವಿ ಚಿತ್ತಾಲ್ ಸಂದೇಶ ವಾಚಿಸಿದರು. ವೈಷ್ಣವಿ, ವರ್ಷಾ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಸುಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ದಿವ್ಯಶ್ರೀ ಖಾರ್ವಿ, ರೇಷ್ಮಾ ನಾಯಕ್ ಮತ್ತು ದೈಹಿಹ ಶಿಕ್ಷಣ ಶಿಕ್ಷಕ ಸೂರಜ್ ಸಾರಂಗ್ ಮಕ್ಕಳ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ಉಷಾ, ಸಂಗೀತಾ ಮತ್ತು ಶ್ರೀಪತಿ ಭಟ್ ಸಹಕರಿಸಿದರು.