ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.25: ಸೇನಾ ಟ್ರಕ್ ಅಪಘಾತದಲ್ಲಿ ಮೃತಪಟ್ಟ ಯೋಧ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಗುರುವಾರ ಜಮ್ಮುವಿನಿಂದ ಸೇನಾ ವಿಮಾನದಲ್ಲಿ ರಾತ್ರಿ ಹೊತ್ತಿಗೆ ಉಡುಪಿ ತಲುಪಿದೆ, ರಾತ್ರಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಅವರು ಸ್ವತಃ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿ ಗೌರವ ಸಲ್ಲಿಸಿದರು.



ಬೆಳಿಗ್ಗೆ 10 ಗಂಟೆಗೆ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಅನೂಪ್ ಪೂಜಾರಿ ಅವರ ಬೀಜಾಡಿ ನಿವಾಸಕ್ಕೆ ಕೊಂಡೊಯ್ಯಲಾಯಿತು. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗಿದೆ. ದಾರಿಯುದ್ದಕ್ಕೂ ಸಾರ್ವಜನಿಕರು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.


ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (33) ಅವರು ಕೂಡ ಹುತಾತ್ಮರಾಗಿದ್ದರು. ಈ ದುರ್ಘಟನೆ ಸಂಭವಿಸಿದೆ ಐವರು ಯೋಧರ ಪೈಕಿ ಮೂವರು ಕರ್ನಾಟಕದವರಾಗಿದ್ದರು.
ಇದನ್ನೂ ಓದಿ:► ಹುತಾತ್ಮ ಯೋಧ ಅನೂಪ್ ಪೂಜಾರಿ ಅವರಿಗೆ ಹುಟ್ಟೂರು ಬೀಜಾಡಿಯಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ- https://kundapraa.com/?p=80737 .
ಕಳೆದ 13 ವರ್ಷಗಳಿಂದ ಸೇನೆಯಲ್ಲಿರುವ ಅನೂಪ್ 33ನೇ ವಯಸ್ಸಿಗೆ ಹವಾಲ್ದಾರ್ ಆಗಿ ಭಡ್ತಿ ಹೊಂದಿದ ವೀರ ಯೋಧರಾಗಿದ್ದಾರೆ. ಬಡತನದ ನಡುವೆ ಭಾರತಾಂಬೆಯ ಸೇವೆ ಮಾಡಬೇಕೆಂದು ಹಠದಿಂದ ಸೈನ್ಯ ಸೇರಿದ್ದ ಅನೂಪ್ 14 ವರ್ಷ ಸೇವೆ ಸಲ್ಲಿಸಿದ್ದಾರೆ. 2022ರಲ್ಲಿ ಅನೂಪ್‌ಗೆ ವಿವಾಹವಾಗಿತ್ತು. ಎರಡು ವರ್ಷದ ಪುಟ್ಟ ಮಗುವಿದ್ದು, ಇಬ್ಬರು ಸಹೋದರಿಯರು, ಅಪಾರ ಬಂಧು ಮಿತ್ರರು, ಗ್ರಾಮಸ್ಥರು, ಗೆಳೆಯರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇದನ್ನೂ ಓದಿ ► ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ: ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ – https://kundapraa.com/?p=80654 .















