ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರೀಯ ಕ್ಷಯರೋಗ ವಿಭಾಗದ ಮುಖ್ಯ ಸಹಾಯಕ ನಿರ್ದೇಶಕ ಡಾ. ರಘುರಾಮ್ ರಾವ್, ವಿಶ್ವ ಆರೋಗ್ಯ ಸಂಸ್ಥೆಯ ರಾಷ್ಟ್ರೀಯ ಸಲಹೆಗಾರ ಡಾ. ಮ್ರಿಜೆನ್ ದೆಖ, ಕೇಂದ್ರೀಯ ಕ್ಷಯ ರೋಗ ವಿಭಾಗದ ತಾಂತ್ರಿಕ ಅಧಿಕಾರಿ ಶಶಾಂಕ್ ಮಾಳವಿಯ ಮತ್ತು ಕೆ.ಎಚ್.ಪಿ.ಟಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಎಚ್.ಎಲ್. ಅವರು ಗಂಗೊಳ್ಳಿಗೆ ಶುಕ್ರವಾರ ಭೇಟಿ ನೀಡಿದರು.
ಗಂಗೊಳ್ಳಿಯ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಗ್ರಾಮ ಪಂಚಾಯತ್ ಗಂಗೊಳ್ಳಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಇದರ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ವೀಕ್ಷಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ನೈರ್ಮಲ್ಯ, ಸಮಗ್ರ ಆರೋಗ್ಯ, ಉಪಶಾಮಕ ಆರೈಕೆ ಹಾಗೂ ಗ್ರಾಮ ಪಂಚಾಯತ್‌ನ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒ ನಯನಾ ಮತ್ತು ಆಶಾ ಕಾರ್ಯಕರ್ತೆ ಕಲ್ಪನಾ ಅವರು ಕ್ಷಯರೋಗವನ್ನು ಪತ್ತೆ ಹಚ್ಚಿ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ಮತ್ತು ಕ್ಷಯರೋಗ ಮುಕ್ತ ಗಂಗೊಳ್ಳಿ ಗ್ರಾಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೀನುಗಾರರಿಗೆ, ವಲಸೆ ಕಾರ್ಮಿಕರಿಗೆ ಮಧುಮೇಹ, ರಕ್ತದೊತ್ತಡ, ರಕ್ತಹೀನತೆ, ಕ್ಷಯರೋಗದ ಪರೀಕ್ಷೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಚ್.ಪಿ.ಟಿ.ಯ ಡಾ. ಸ್ವರೂಪ್, ಅನ್ನಾ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಲೆಕ್ಕ ಸಹಾಯಕ ಶೇಖರ ಜಿ., ಹಿರಿಯ ಸಿಬ್ಬಂದಿ ನಾರಾಯಣ ಶ್ಯಾನುಭಾಗ್, ಕಿರಿಯ ಆರೋಗ್ಯ ಸಹಾಯಕಿ ಪ್ರಜ್ವಲಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.