ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ 21 ಕೆಎಆರ್ ಬಿಎನ್ ಎನ್‌ಸಿಸಿ ಉಡುಪಿಯ ಕೆಡೆಟ್ ಆಗಿರುವ ಸಿಎಸ್‌ಎಮ್ ನಿರ್ಭಯ್ ಯು ಶೆಟ್ಟಿ ಪ್ರತಿಷ್ಠಿತ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಮೊದಲ ಶಿಬಿರದಿಂದ ಪ್ರಾರಂಭಿಸಿ ಪೂರ್ವ ಆರ್‌ಡಿಸಿ I ಮತ್ತು III ರವರೆಗೆ ಅಸಾಧಾರಣ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಪ್ರದರ್ಶಿಸಿ ನವದೆಹಲಿ ಗಣರಾಜ್ಯೋತ್ಸವ ಶಿಬಿರ 2025ಕ್ಕೆ ಹೆಮ್ಮೆಯಿಂದ ನಮ್ಮ 21 ಕೆಎಆರ್ ಬಿಎನ್ ಎನ್‌ಸಿಸಿ ಉಡುಪಿ, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಾರೆ.
ಹಲವು ವರ್ಷಗಳ ನಂತರ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿರುವ ಪ್ರೌಢ ವಿಭಾಗದ ಕೆಡೆಟ್ ಇವರಾಗಿದ್ದು ಉಡುಪಿ ಬೆಟಾಲಿಯನ್ ಗೆ ಇದೊಂದು ಹೆಮ್ಮೆಯ ಸಂಗತಿ, ವಿದ್ಯಾರ್ಥಿಯ ಈ ಕಠಿಣ ಪರಿಶ್ರಮದ ಸಾಧನೆಗೆ ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡಿ, ಹಂತ ಹಂತವಾಗಿ ಆತನಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ಅಸೋಸಿಯೇಟ್ ಎನ್ ಸಿಸಿ ಅಧಿಕಾರಿ ವೆಂಕಟ ಕೃಷ್ಣ ಅವರ ಕೊಡುಗೆ ಅಪಾರ.
ವಿದ್ಯಾರ್ಥಿಯ ಈ ಸಾಧನೆ ಉಳಿದ ಮಕ್ಕಳಿಗೆ ಸ್ಫೂರ್ತಿ ಆಗಲಿ, ಬದುಕಿನಲ್ಲಿ ಸಾಧಿಸುವ ಛಲ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈತ ಸಾಬೀತು ಮಾಡುವ ಮೂಲಕ ಉಡುಪಿ ಜಿಲ್ಲೆಯ ಕುಂದಾಪುರದ ನಮ್ಮ ಸಂಸ್ಥೆಯ ಹೆಸರನ್ನು ದೆಹಲಿಯಲ್ಲಿ ಪಸರಿಸುವಂತೆ ಮಾಡಿದ ಈತನ ಪರಿಶ್ರಮಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮಾ ಎಸ್. ಶೆಟ್ಟಿ ದಂಪತಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.










