ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ʼನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂಬ ಧ್ಯೇಯವಾಕ್ಯದಂತೆ ಜ್ಞಾನದಾನವೇ ವಿದ್ಯಾಸಂಸ್ಥೆಗಳ ಪ್ರಧಾನಕಾರ್ಯ. ಅದು ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯನ್ನು ಮೂಡಿಸುವ ಅವರಲ್ಲಿ ಚಿಂತನಾಶೀಲತೆಯನ್ನು ಉದ್ದೀಪನಗೊಳಿಸುವ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿರಬೇಕು. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳ ಸಾರವನ್ನು ವಿದ್ಯಾರ್ಥಿ ಸಮೂಹಕ್ಕೆ ತಲುಪಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ‘ಭಾವಾಂತರಂಗ-ಪರಿಪೂರ್ಣ ಬದುಕಿನೆಡೆ ನಮ್ಮ ಪಯಣ’ ಎನ್ನುವ ಸಂಪೂರ್ಣ ಚಟುವಟಿಕೆ ಆಧಾರಿತ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಹತ್ತು ವರ್ಷಗಳಿಂದ ನಡೆಸುತ್ತಿದ್ದು, ಈ ವರ್ಷ ಜ. 3ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಸ೦ಪನ್ಮೂಲ ವ್ಯಕ್ತಿಗಳು ಜೇನುಗೂಡಿಗೆ ಕಲಾತ್ಮಕ ಜೇನುಹುಳುಗಳನ್ನು ಪೋಣಿಸುವ ಮೂಲಕ ವಿನೂತನ ರೀತಿಯಲ್ಲಿ ಉದ್ಘಾಟಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅವರು ಮಾತನಾಡಿ, “ಭಾವಾಂತರಂಗವು ನಮ್ಮ ಶಾಲೆಯಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದು ವಿದ್ಯಾರ್ಥಿಗಳು ಯಶಸ್ಸಿನತ್ತ ದಾಪುಗಾಲು ಇಡುವಂತೆ ಪ್ರೇರೇಪಿಸುತ್ತದೆ. ನಾವು ಈ ಕಾರ್ಯಕ್ರಮವನ್ನು ಜೇನುಗೂಡಿಗೆ ಕಲಾತ್ಮಕ ಜೇನುಹುಳುಗಳನ್ನು ಪೋಣಿಸುವ ಮುಖೇನ ಉದ್ಘಾಟಿಸಿದ್ದೇವೆ. ಇದರರ್ಥ ಜೇನುಹುಳುಗಳು ಹೂವಿಂದ ಹೂವಿಗೆ ಹಾರಿ, ಹೂವಿಗೆ ಹಾನಿ ಮಾಡದೆ, ಎಲ್ಲವೂ ಒಂದಾಗಿ ಪರಿಶ್ರಮಪಟ್ಟು ಜೇನನ್ನು ತಯಾರಿಸಿ, ಎಲ್ಲರಿಗೂ ಸಿಹಿಯನ್ನು ಹಂಚುವಂತೆ ನಾವೂ ಕೂಡ ಉತ್ತಮ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಹಿತಕರವಾದ ಕೊಡುಗೆಯನ್ನು ನೀಡುವಂತಾಗಬೇಕು. ಆ ನಿಟ್ಟಿನಲ್ಲೇ ವಿಶೇಷ ಪರಿಣತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಈ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಇದರ ಸದುಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 46 ವಿವಿಧ ಬಗೆಯ ಕಾರ್ಯಾಗಾರಗಳನ್ನು 49 ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಯಿತು. ಶಿವಾನಂದ ಕಳವೆ ಅವರು ಪರಿಸರ ಶಿಕ್ಷಣದ ಕುರಿತು ಮಾಹಿತಿ ನೀಡಿದರೆ, ಸುಕನ್ಯಾ ಮತ್ತು ಸುಂದ್ರಕಲಾ ಕಾವಿಕಲೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಸಂದೀಪ ಭಟ್ ಅವರಿವರ ನಡುವೆ ಎಂಬ ಕಾರ್ಯಾಗಾರವನ್ನು ನಡೆಸಿಕೊಟ್ಟರೆ, ಸದ್ಗುರುಭಟ್ ವಂಡರ್ ಎಂಬ ಕಾರ್ಯಾಗಾರ ನಡೆಸಿಕೊಟ್ಟರು. ಗಣಪತಿ ಹೆಗಡೆ ಮತ್ತು ಗಣೇಶ ಹೆಗಡೆ ಅವರು ಕಲೆಯೂ ಒಂದು ಕಲೆ ಎಂಬ ಕಾರ್ಯಾಗಾರದಲ್ಲಿ ಕಲೆಯ ವಿವಿಧ ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ರವಿಪ್ರಸಾದ್ ಆಚಾರ್ ಕಲಾಚಿತ್ತಾರದ ಬಗ್ಗೆ ತಿಳಿಸಿದರೆ, ನಾಗರತ್ನ ಹೇರ್ಳೆ ಲಕ್ಷ್ಯದತ್ತ ಲಕ್ಷ್ಯವೆಂಬ ಕಾರ್ಯಾಗಾರ ನಡೆಸಿಕೊಟ್ಟರು. ನರೇಂದ್ರ ಎಸ್. ಗಂಗೊಳ್ಳಿ ಅವರು ಕೌಶಲ್ಯಪೂರ್ಣವಾಗಿ ಲೇಖನಗಳನ್ನು ಬರೆಯುವ ಕಲೆಯನ್ನು ಕಲಿಸಿಕೊಟ್ಟರು. ಬೈಂದೂರಿನ ಚಂದ್ರಶೇಖರ ನಾವುಡರು ಸೃಜನಾತ್ಮಕ ಬರವಣಿಗೆಯ ಕಲೆಯನ್ನು ಪರಿಚಯಿಸಿದರು. ಲತಾ ಡಿ. ಶೆಟ್ಟಿ ಅವರು ಸಾಕ್ಸ್ ಬಟ್ಟೆಯಿಂದ ಹೂ ಬೊಕ್ಕೆ ತಯಾರಿಸುವ ಕೌಶಲ್ಯವನ್ನು ಕಲಿಸಿಕೊಟ್ಟರು. ವನಿತಾಶೆಟ್ಟಿ ಅವರು ಏಕಪಾತ್ರಾಭಿನಯದ ಕಲೆಯನ್ನು ತಿಳಿಸಿಕೊಟ್ಟರು. ವೀಣಾ ಪಿ. ಶ್ಯಾನುಭೋಗ್- ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳುವ ವಿವಿಧ ಆಟಗಳನ್ನು ಪರಿಚಯಿಸಿದರೆ, ಶಿಲ್ಪಾ ಗಣೇಶ್ ಬೆಂಕಿಬಳಸದೆ ಅಡುಗೆ ತಯಾರಿ ನಡೆಸಿ ಮಕ್ಕಳಿಗೆ ಸವಿರುಚಿಯ ಅನುಭವ ನೀಡಿದರು.
ಪ್ರಸನ್ನಾ ಪ್ರಸಾದ್ ಭಟ್ ವಾಲ್ ಹ್ಯಾಂಗಿಂಗ್ ತಯಾರಿಕೆಯನ್ನು ತಿಳಿಸಿಕೊಟ್ಟರು. ಉಷಾ ಕೆ. ಕೀಬಂಚ್ ತಯಾರಿಕೆಯ ಬಗ್ಗೆ ತಿಳಿಸಿಕೊಟ್ಟರೆ, ಶಾಂಭವಿಯವರು ಮಂಡಲ ಕಲೆ ಬಗ್ಗೆ ತಿಳಿಸಿದರು. ಸುರೇಖಾ ಭಟ್ ವಿವಿಧ ರಂಗೋಲಿಗಳ ರಚನೆಯನ್ನು ತಿಳಿಸಿದರು. ಜ್ಯೋತಿ ಶೇಟ್ ಪೇಪರ್ ಆರ್ಟ್ ಬಗ್ಗೆ ತಿಳಿಸಿದರೆ, ವಂದನಾಕೃಷ್ಣ ಮ್ಯಾಕ್ರೇಮ್ ಬಗ್ಗೆ ಮಾಹಿತಿ ನೀಡಿದರು. ರಾಜಶೇಖರ ತಾಳಿಕೋಟೆ ಅವರು ವಿವಿಧ ಮುಖವಾಡ ತಯಾರಿಕೆಯ ಬಗ್ಗೆ ತಿಳಿಸಿದರೆ, ಜ್ಯೋತಿ ಪ್ರಶಾಂತರು ವೇದಿಕೆಗಳಲ್ಲಿ ವಿಭಿನ್ನ ಸಂದರ್ಭಗಳಲ್ಲಿ ನೀಡುವ ಭಾಷಣ ಕಲೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಮಂಜುನಾಥ ದೇವಾಡಿಗರು ಸ್ಪಂಜ್ ಬಳಸಿ ವಿವಿಧ ಬೊಂಬೆಗಳನ್ನು ತಯಾರಿಸುವ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಸುಧಾ ಭಂಡಾರಿಯವರು ತಮ್ಮ ಕವನ ರಚನೆ ಕಾರ್ಯಾಗಾರದಲ್ಲಿ ಪದ್ಯವ ಹೆಣೆಯುವ ತಂತ್ರಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಮಾಲಿನಿ ಎಂ. ಪಿ. ಹಾಡು-ಪಾಡುಗಳ ಬಗ್ಗೆ ತಿಳಿಸಿಕೊಟ್ಟರೆ, ದೇವರಾಜ ಬಿ. ಮತ್ತು ಶ್ರೀ ನಾಗಾರ್ಜುನ ನಾಯ್ಕ ಇವರು ದೈನಂದಿನ ಜೀವನದಲ್ಲಿ ವಿಜ್ಞಾನ ವೆಂಬ ವಿಷಯದಲ್ಲಿ ಮಾಹಿತಿ ನೀಡಿದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ., ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಶಿಕ್ಷಕ-ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಪೂರ್ಣಿಮಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಥಮಿಕ ಶಾಲಾ ಸಂಯೋಜಕರಾದ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.