ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಎಲ್ಲಾ ಜನ್ಮಗಳಲ್ಲಿ ಪುಣ್ಯವನ್ನು ಮಾಡಿದಾಗ ಪಾಪದಿಂದ ಮುಕ್ತನಾಗಿ ಪರಿಶುದ್ಧನಾದಾಗ ಮನುಷ್ಯ ಜನ್ಮ ಪಡೆಯುತ್ತಾನೆ. ಮನುಷ್ಯ ಜನ್ಮ ಪಡೆದಾಗ ಮತ್ತುಳಿದ ಎಲ್ಲಾ ಜೀವಿಗಳಂತೆ ಸುಮ್ಮನೆ ಜೀವನವನ್ನು ವ್ಯರ್ಥ ಮಾಡದೆ ಆ ಮನುಷ್ಯ ಜನ್ಮ ಸಾರ್ಥಕ ಆಗಬೇಕಾದರೆ ಭಗವಂತನ ಭಜನೆ ಮಾಡಬೇಕು, ಜನಹಿತ ಕಾರ್ಯಗಳನ್ನು ಉತ್ತಮ ಕಾರ್ಯ ಮಾಡುತ್ತಿರಬೇಕು ಎಂದು ತಾಳಗುಪ್ಪ ಪ್ರಣವ ಪೀಠ ಕೂಡ್ಲಿ ಬಾರಂಗಿ ಮಹಾಸಂಸ್ಥಾನ ಮಠದ ವಿದ್ವಾನ್ ಸಿದ್ಧವೀರ ಸ್ವಾಮೀಜಿ ಹೇಳಿದರು.
ಕುಂದಾಪುರ ತಾಲೂಕಿನ ನಾಯಕವಾಡಿ-ಗುಜ್ಜಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಾರಂಭ ’ಸುವರ್ಣ ಸಂಗಮ’ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
![](https://i0.wp.com/kundapraa.com/wp-content/uploads/2025/01/04gan2-1.jpg?resize=747%2C244&ssl=1)
ಸಂಘ ಸಂಸ್ಥೆಗಳು ತನ್ನ ನಿರಂತರತೆಯನ್ನು ಕಾಪಾಡಿಕೊಂಡು ಒಂದು ಹಂತಕ್ಕೆ ಬರಬೇಕಾದರೆ ತುಂಬಾ ಪ್ರಯತ್ನ, ತಾಳ್ಮೆ ಅವಶ್ಯಕ. ಇಂತಹ ತಾಳ್ಮೆ ಪ್ರಯತ್ನದ ಪ್ರತಿಫಲವಾಗಿ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ 50ರ ಸಂಭ್ರಮವನ್ನು ಸಂತೋಷದಿಂದ ಆಚರಿಸುತ್ತಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಅವರು ಪ್ರಶಂಶಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಾತಿ, ಧರ್ಮಗಿಂತ ನನ್ನ ದೇಶ ಮುಖ್ಯ ಎನ್ನುವ ಹೃದಯ ತುಂಬಿರುವ ಸಮಾಜ ನಿರ್ಮಾಣವಾದರೆ ಆ ಸಮಾಜದಲ್ಲಿ ಜಾತಿ, ಧರ್ಮ, ವರ್ಗ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಕುಟುಂಬದಂತೆ ಬದುಕಲು ಸಾಧ್ಯವಿದೆ. ಎಲ್ಲಾ ಜನರು ಮುಖ್ಯವಾಹಿನಿಗೆ ಬಂದಾಗ ಮಾತ್ರ ಶಕ್ತಿಯಾಗಿ ಯುಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿಭೆ ಎನ್ನುವುದು ಯಾರ ಒಬ್ಬ ವ್ಯಕ್ತಿಯ ಒಂದು ಭಾಗದ ಸ್ವತ್ತಲ್ಲ. ಸಮಾಜಕ್ಕೆ ಕೊಡುಗೆಯಾಗಿ ಬದುಕಬಲ್ಲ ಭಾವನಾತ್ಮಕ ಜೀವಗಳನ್ನು ಸೃಷ್ಟಿ ಮಾಡಿರುವ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ಸಮಾಜಕ್ಕೆ ಒಂದು ಶಕ್ತಿಯಾಗಿ ಬೆಳೆಯಲಿದೆ ಎಂದು ಹಾರೈಸಿದರು.
ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ರಾಮ ನಾಯ್ಕ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶುಭ ಹಾರೈಸಿದರು. ಇದೇ ಸಂದರ್ಭ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ., ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ. ಬಿಜೂರು, ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷ ರಘುರಾಮ ಟಿ., ಮೊಕ್ತೇಸರ ಚಂದ್ರಕಾಂತ ಕೆ., ಅಂಗನವಾಡಿ ಶಿಕ್ಷಕಿ ನಿರೀಕ್ಷಾ, ಸಂಸ್ಥೆಯ ಗೌರವಾಧ್ಯಕ್ಷ ರವೀಂದ್ರ ಟಿ., ಪ್ರ.ಕಾರ್ಯದರ್ಶಿ ನಿತೇನ್ ಎನ್.ಡಿ. ಮತ್ತಿತರರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಶ್ರೀಧರ ಎನ್. ಸ್ವಾಗತಿಸಿದರು. ಗೌರವ ಸಲಹೆಗಾರ ರಾಜು ಎನ್.ಮಾಸ್ತರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸತ್ಯನಾ ಕೊಡೇರಿ ಸ್ಮರಣ ಸಂಚಿಕೆ ಕುರಿತು ಮಾತನಾಡಿದರು. ಆರ್.ಜೆ. ಪ್ರಸನ್ನ ಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.