ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬವಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೂ.12 ಲಕ್ಷ ವೆಚ್ಚದಲ್ಲಿ ನಿರ್ಮಾಣದಗೊಂಡ ದಿ. ಗಂಟಿಹೊಳೆ ನಾರಾಯಣ ಶೆಟ್ಟಿ ಸ್ಮರಣಾರ್ಥ ಶ್ರೀಮತಿ ಗೀತಾ ಗೋಕುಲ ಶೆಟ್ಟಿ ಮೇಲ್ಗಾಯಾಡಿ ಮತ್ತು ಹಳೆ ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ನೂತನ ‘ಬ್ರಿಥಿ ವೇದಿಕೆ’ ಲೋಕಾರ್ಪಣೆಗೊಳಿಸಲಾಯಿತು.
ನೂತನ ವೇದಿಕೆ ಉದ್ಘಾಟಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಬ್ರಿಥಿ ವೇದಿಕೆಯ ಮಹಾಪೋಷಕರಾದ ಗೋಕುಲ ಶೆಟ್ಟಿ. ಜಿ ಅವರು ಮಾತನಾಡಿ, ಒಂದು ಸರ್ಕಾರಿ ಶಾಲೆ ಉಳಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ. ಅಧ್ಯಾಪಕರು, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ನಡುವಿನ ಪರಸ್ಪರ ಹೊಂದಾಣಿಕೆ ಹಾಗೂ ಸಹಕಾರ ಭಾವನೆಯಿಂದ ಸರಕಾರಿ ಕನ್ನಡ ಶಾಲೆಯನ್ನು ಉಳಿಸಬಹುದು ಎಂದು ಮನವಿ ಮಾಡಿದರು.
ಧ್ವಜಾರೋಹಣವನ್ನು ಸ.ಹಿ.ಪ್ರಾ ಶಾಲೆ ಬವಳಾಡಿಯ ಎಸ್.ಡಿ.ಎಂ,ಸಿ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೂರು ಗ್ರಾ.ಪಂ. ಅಧ್ಯಕ್ಷರಾದ ಚೆಣ್ಣಮ್ಮ ವಹಿಸಿದ್ದರು. ಈ ವೇಳೆ ಬಿಜೂರು ಪಂಚಾಯತ್ ಉಪಾಧ್ಯಕ್ಷ ರಂಜಿತ್ ಹೊಸ್ಕೋಟೆ, ಸದಸ್ಯರಾದ ರೇವತಿ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ರಮಾನಾಥ ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಧ್ಯಾಯ ನಾರಾಯಣ ಕೆ. ಬಿಲ್ಲವ ಸಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಶಂಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ರಾಘವೇಂದ್ರ ಪಡುವರಿ ವಂದಿಸಿದರು. ಶಿಕ್ಷಕಿ ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ನೂತನ ವೇದಿಕೆ ಉದ್ಘಾಟನೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ‘ಅಕ್ಷರಭ್ಯಾಸ’ , ‘ಹೆತ್ತವರಿಗೆ ಪಾದಪೂಜೆ’ ಮತ್ತು ಛದ್ಮವೇಷ ಎಂಬ ವಿಶಿಷ್ಟ ಕಾರ್ಯಕ್ರಮಗಳು ಗಮನ ಸೆಳೆದವು.