ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ ಮಹಿಳಾ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ದಿನಮಾನಗಳಲ್ಲಿ ಸಂಘಟನೆಗಳ ಮೂಲಕ ಮಹಿಳೆಯರು ಒಗ್ಗೂಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಅವರು ನಾಗೂರು ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ನಡೆದ ಜೆಸಿಐ ಉಪ್ಪುಂದ ಸುಪ್ರಿಂ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಂಡು ಹೆಣ್ಣು ಎಂಬ ಭೇಧವಲ್ಲದೇ ಪ್ರತಿಯೊಬ್ಬರಲ್ಲಯೂ ಕೂಡ ಒಂದೊಂದು ವಿಶೇಷ ಶಕ್ತಿಯಿದ್ದು, ಅಭಿವೃದ್ಧಿಗೆ ಪೂರಕವಾಗಿ ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ನಿರ್ಗಮಿತ ಅಧ್ಯಕ್ಷೆ ಸುಮಾ ಆಚಾರ್ ಸ್ವಾಗತಿಸಿ, ಗತವರ್ಷದ ವರದಿ ಮಂಡಿಸಿ, 2025ನೇ ಸಾಲಿನ ನೂತನ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪುರಸ್ಕೃತ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೆಸಿಐನ ನೂತನ ಟ್ರಸ್ಟ್ ಬೈಲೋವನ್ನು ಬಿಡುಗಡೆಗೊಳಿಸಲಾಯಿತು.
ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ. ಎ., ವಲಯ ಜೆಸಿಐ ಪ್ರಾಂತ್ಯ ಉಪಾಧ್ಯಕ್ಷ ಸಿಎ ಅನ್ವೇಶ್ ಶೆಟ್ಟಿ, ನಿಟಕಪೂರ್ವ ವಲಯ ಉಪಾಧ್ಯಕ್ಷ ಮಂಜುನಾಥ ದೇವಾಡಿಗ, ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶ್ಯಾನುಭೋಗ್, ಜೆಸಿಐ ನಿರ್ಗಮನ ಕಾರ್ಯದರ್ಶಿ ರವಿರಾಜ್ ಪೂಜಾರಿ, ಲೇಡಿ ಜೆಸಿ ಅಧ್ಯಕ್ಷೆ ವೀಣಾ ಆಚಾರ್, ಮೊದಲಾವರು ಉಪಸ್ಥಿತರಿದ್ದರು. ಜೆಜೆಸಿ ಅಧ್ಯಕ್ಷೆ ಪಂಚಮಿ ಆಚಾರ್ ಜೇಸಿವಾಣಿ ವಾಚಿಸಿದರು, ತನ ಕಾರ್ಯದರ್ಶಿ ರಾಘವೇಂದ್ರ ಕೊಡೇರಿ ವಂದಿಸಿದರು.