ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯಲ್ಲಿ 2022-23 ಹಾಗೂ 2023-24 ರಲ್ಲಿ ಉತ್ತೀರ್ಣರಾದ ಪದವಿ, ಸ್ನಾತಕೋತರ ಪದವಿ ಮತ್ತು ಡಿಪ್ಲೋಮಾಗಳ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಜನವರಿ 6 ರಿಂದ 20 ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ಬಿ. ಬ್ಲಾಕ್, ರೂ.ನಂ. 201 ರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಇಲ್ಲಿ ಅಯೋಜಿಸಲಾಗಿದೆ.
ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿಯೂ ವಿಶೇಷ ನೋಂದಣಿ ಅಭಿಯಾನವನ್ನು ಆಯೋಜಿಸಲಾಗಿದ್ದು, ಆಯಾ ತಾಲೂಕಿನ ಅಭ್ಯರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಪ್ರತಿ ತಿಂಗಳು ಪದವಿಧರರಿಗೆ 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ರೂ. ಗಳನ್ನು ನಿರುದ್ಯೋಗ ಭತ್ಯೆಯ ಮೂಲಕ ನೀಡಲಾಗುವುದು. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೊರೈಸಿದ ಅಭ್ಯರ್ಥಿಗಳು ಕೂಡ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
2024-25 ರಲ್ಲಿ ಪದವಿ/ಡಿಪ್ಲೋಮಾ ಹಾಗೂ ಸ್ನಾತಕೋತರ ಉತ್ತಿರ್ಣರಾದ ವಿಧ್ಯಾರ್ಥಿಗಳು, ಪದವಿ/ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯೊಳಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿಧ್ಯಾಭ್ಯಾಸ ಮುಂದುವರೆಸದೆ ಇರುವವರು ಹಾಗೂ ಕರ್ನಾಟಕದಲ್ಲಿ ವಾಸವಿರುವರು (ಕನಿಷ್ಠ 6 ವರ್ಷಗಳ ವರೆಗೆ ಪದವಿ/ಡಿಪ್ಲೋಮಾ ದವರೆಗೆ ಅಧ್ಯಯನ ಮಾಡಿದವರು) ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಪ್ರತಿ ತಿಂಗಳು ಈ ಪ್ರಯೋಜನ ಪಡೆಯಬೇಕಿದ್ದರೆ, ಪ್ರತಿ ತಿಂಗಳಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲ ವೆಂದು ಸ್ವಯಂ ಘೋಷಣೆ ಮಾಡಬೇಕಾಗಿರುತ್ತದೆ. ಪ್ರಸಕ್ತ ಪ್ರತೀ ಗ್ರಾಮದಲ್ಲಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರ ಲಭ್ಯವಿದ್ದು, ಅಭ್ಯರ್ಥಿಗಳು ನೋಂದಣಿಯನ್ನು ಮಾಡಿಕೊಳ್ಳಬಹುದು ಹಾಗೂ ಸ್ವಯಂ ಘೋಷಣೆಯನ್ನು ಪ್ರತೀ ತಿಂಗಳು 25ನೇ ತಾರೀಕಿನ ಒಳಗಾಗಿ ಸಲ್ಲಿಸಬೇಕು. ಪ್ರಯೋಜನ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತೀ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುವುದಿಲ್ಲ. ಪ್ರತೀ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿರುವ ಕುರಿತು ಎಸ್.ಎಂ.ಎಸ್ ಸಂದೇಶ ಅಭ್ಯರ್ಥಿಗಳಿಗೆ ರವಾನಿಸಲಾಗಿರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://sevasindhugs.karnataka.gov.in ಯುವನಿಧಿ ಯೋಜನೆಯ ಟೋಲ್ ಪ್ರೀ ಸಹಾಯವಾಣಿ ಸಂಖ್ಯೆ 18005999918 ಅಥವಾ 18005997154 ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಮೊ.ನಂ: 9945856670, 8105774936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.