ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಯುವ ಸಮೂಹ ಪ್ರತಿಯೊಂದು ರಾಷ್ಟ್ರಗಳ ದಿವ್ಯ ಸಂಪತ್ತು ಮತ್ತು ದೇಶದ ಆಶಯ ಕೂಡ ಎಂಬುದು ಯಾರು ಕೂಡ ಅಲ್ಲಗೆಳೆಯುವಂತಿಲ್ಲ. ಯುವ ಸಮೂಹದ ಶಕ್ತಿ, ಸಾಮರ್ಥ್ಯಗಳು ಒಂದು ದೇಶದ ಸವಾಂಗೀಣ ಅಭಿವೃದ್ಧಿಗೆ ಪೂರಕ. ಯುವಕರು ಆಧುನಿಕತೆ ಮತ್ತು ತಾಂತ್ರಿಕತೆಯ ಹರಿಕಾರರು ಹಾಗೂ ವಿಭಿನ್ನ ಕ್ಷೇತ್ರದಲ್ಲಿ ಕನಸುಗಳನ್ನು ಕಾಣುವ ಕನಸುಗಾರರು. ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯ ಮತ್ತು ಶ್ರಮಗಳ ಸಂಗಮವೇ ಯುವ ಸಮೂಹ. ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು ಎಂದು ಭಾರತೀಯ ಸೇನೆಯ ನಿವೃತ್ತ ಇಂಜಿನಿಯರ್ ಬೆಳ್ಳಾಲ ಗೋಪಿನಾಥ ರಾವ್ ಹೇಳಿದರು.
ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಗಂಗೊಳ್ಳಿ ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ಸರಸ್ವತಿ ವಿದ್ಯಾನಿಧಿ ಗಂಗೊಳ್ಳಿ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಸ್ವಾಮೀ ವಿವೇಕಾನಂದರು ಯುವಕರಲ್ಲಿ ಹುರುಪು-ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದರು. ವಯಸ್ಸಿನ ಎಲ್ಲೆ ಮೀರಿ ಪ್ರತಿಯೊಬ್ಬರೂ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಜೀವನ ನಿರ್ಮಿಸಿಕೊಳ್ಳಲು ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕಟಿಬದ್ಧರಾಗಬೇಕು ಎಂದು ಹೇಳಿದರು.
ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ. ಯು. ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸರಸ್ವತಿ ವಿದ್ಯಾನಿಧಿ ಅಧ್ಯಕ್ಷ ಎಂ.ರವೀಂದ್ರ ಪ್ರಭು ಶುಭ ಹಾರೈಸಿದರು.
ಈ ಸಂದರ್ಭ ಬೆಳ್ಳಾಲ ಗೋಪಿನಾಥ ರಾವ್ ಅವರನ್ನು ಗೌರವಿಸಲಾಯಿತು. ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಗೋಪಾಲ ದೇವಾಡಿಗ ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲೆಯ ಮುಖೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಸ್ವಾಗತಿಸಿದರು. ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ದಿವ್ಯಶ್ರೀ ಆಚಾರ್ಯ ಅತಿಥಿಯನ್ನು ಪರಿಚಯಿಸಿದರು. ಸಹಶಿಕ್ಷಕಿ ರೇಷ್ಮಾ ನಾಯಕ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು.