ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾನವ ಸಂಘಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕುದ್ರುಕೋಡು ಜಗದೀಶ್ ಶೆಟ್ಟಿ ಹೇಳಿದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್‌ಗೆ ಅಧೀಕೃತ ಭೇಟಿಯ ಬಳಿಕ ಉಪ್ಪುಂದ ನಂದನವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ 6ರ ವ್ಯಾಪ್ತಿಯಲ್ಲಿ ಬರುವ ಹತ್ತು ಕ್ಲಬ್‌ಗಳು ಈ ವರ್ಷ ವಿವಿಧ ಭಾಗಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸ ತಂದಿದೆ. ಪ್ರಸಕ್ತ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಾಮಾಜಿಕ ಕೈಂಕರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜದ ದುರ್ಬಲರ ಸೇವೆಯಲ್ಲಿ ಕೈಜೋಡಿಸಿರುವುದು ಅರ್ಥಪೂರ್ಣವಾಗಿದೆ ಎಂದು ಎಲ್ಲಾ ಕ್ಲಬ್‌ಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ ಕ್ಲಬ್‌ನ ಪೂರ್ವಾಧ್ಯಕ್ಷರಾದ ಜಯಶೀಲ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಚೇರ್ಕಾಡಿ ರವಿರಾಜ್ ಹೆಗ್ಡೆ ಇವರು ವಯಕ್ತಿಕವಾಗಿ ನೀಡಿದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಪ್ರಾಂತೀಯ ಅಧ್ಯಕ್ಷ ಕುದ್ರುಕೋಡು ಜಗದೀಶ ಶೆಟ್ಟಿ ಹಾಗೂ 57 ಬಾರಿ ರಕ್ತದಾನ ಮಾಡಿದ ಕ್ಲಬ್‌ನ ನೂತನ ಸದಸ್ಯ ಉದಯ್ ಡಿ. ಆರ್. ಅವರನ್ನು ಸನ್ಮಾನಿಸಲಾಯಿತು. ಘಟಕದ ಖಜಾಂಚಿ ಸುಂದರ ಕೊಠಾರಿ ವರದಿ ಮಂಡಿಸಿದರು. ಲಯನ್ಸ್ ವಲಯಾಧ್ಯಕ್ಷ ಗಿರೀಶ ಶ್ಯಾನುಭೋಗ್, ಪ್ರಾಂತೀಯ ಕಾರ್ಯದರ್ಶಿ ನರಸಿಂಹ ದೇವಾಡಿಗ ಇದ್ದರು.
ಗಾಯಡಿ ವಿಶ್ವನಾಥ ಶೆಟ್ಟಿ ನಿರೂಪಿ, ಘಟಕದ ಕಾರ್ಯದರ್ಶಿ ಸುನಿಲ್ ಜೆ. ಪೂಜಾರಿ ವಂದಿಸಿದರು.















