ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯ ಮೂಲಕ ಕಳೆದ 10 ವರ್ಷಗಳಿಂದ ನಾಡಿನ ಸಾಂಸ್ಕೃತಿಕ ಕ್ಷೇತ್ರದ ಖ್ಯಾತನಾಮರಿಗೆ ನೀಡಲಾಗುತ್ತಿರುವ ಬಿಂದುಶ್ರೀ ಪ್ರಶಸ್ತಿಯನ್ನು ಈ ಭಾರಿ ನಾಡಿನ ಖ್ಯಾತ ಸಾಹಿತಿ, ವೈದ್ಯ, ನಿರೂಪಕ ಡಾ. ನಾ. ಸೋಮೇಶ್ವರ ಅವರಿಗೆ ನೀಡಲಾಗುತ್ತಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸುರಭಿ, ಜನವರಿ 29ರಿಂದ 5 ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನವರಿ 30ರಂದು ಡಾ. ನಾ. ಸೋಮೇಶ್ವರ ಅವರಿಗೆ 11ನೇ ಬಿಂದುಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಡಾ. ನಾ. ಸೋಮೇಶ್ವರ:
ಡಾ. ನಾ. ಸೋಮೇಶ್ವರ ಅವರು ವಿದ್ಯುನ್ಮಾನ ಮಾಧ್ಯಮ ಮತ್ತು ಬರವಣಿಗೆಗಳ ಮೂಲಕ ಜನರ ಹೃದಯ ತಟ್ಟಿದವರು. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಅವರು ಕಳೆದ 22 ವರ್ಷಗಳಿಂದ ನಡೆಸುತ್ತಿರುವ ಈ ಕಾರ್ಯಕ್ರಮ 4,800ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದೆ.
ಸೋಮೇಶ್ವರ ಅವರು ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಅವರು ಪ್ರಸ್ತುತ ಅಸ್ಟ್ರಾಜೆನಿಕ್ ಫಾರ್ಮಾ ಇಂಡಿಯಾ ಲಿಮಿಟೆಡ್ ಸಂಸ್ಥೆಯುಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.
ಅವರು ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನಂದಿ’ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ಬರವಣಿಗೆಗೆ ಮತ್ತು ಉಪನ್ಯಾಸಗಳೆರಡರಲ್ಲಿಯೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ವೈದ್ಯವಿಶ್ವಕೋಶದಲ್ಲಿ ಇವರು ಬರೆದ ಅನುವಂಶಿಕ ರೋಗಗಳನ್ನು ಕುರಿತು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ದೂರದರ್ಶನದಲ್ಲಿ ವಿಜ್ಞಾನ ಹಾಗೂ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಅವರ ಒಟ್ಟು 30ಕ್ಕೂ ಅಧಿಕ ಪುಸ್ತಕಗಳು ಪ್ರಕಟಗೊಂಡಿದ್ದು ಅವುಗಳಲ್ಲಿ “ಬಹಿರಂಗ ಶುದ್ಧ”, “ಏಳುಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು”, “ಬದುಕು ನೀಡುವ ಬದಲೀ ಜೋಡಣೆ”, “ಪ್ರಕೃತಿಯ ಸೂಪರ್ ಕಂಪ್ಯೂಟರ್-ಮಿದುಳು”, ಪ್ರಮುಖವಾದವುಗಳು.
ಸೋಮೇಶ್ವರ್ ಅವರು ನಾರಪ್ಪ ಹಾಗೂ ತಾಯಿ ಅಂಜನಾರವರ ಮಗನಾಗಿ 14 ಮೇ 1955 ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ಅವರ ಪತ್ನಿ ರುಕ್ಮಾವತಿ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ್ಟ ಅಂತಾರಾಷ್ಟ್ರೀಯ ಪ್ರಶಸ್ತಿ, ಡಾ|| ಬಿ.ಸಿ. ರಾಯ್ ವೈದ್ಯ ದಿನಾಚರಣೆ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ವೈದ್ಯಸಾಹಿತ್ಯ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಬಹುಮುಖ ವ್ಯಕ್ತಿತ್ವದ ಡಾ. ನಾ. ಸೋಮೇಶ್ವರ ಅವರಿಗೆ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸುರಭಿ ಸಂಸ್ಥೆ 11ನೇ ಬಿಂದುಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್. ಆನಂದ ಮದ್ದೋಡಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















