ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿವೃತ್ತಿ ವೃತ್ತಿ ಬದುಕಿಗೆ ಹೊರತು ನಮ್ಮ ಸಾಮಾಜಿಕ ಜೀವನಕ್ಕಲ್ಲ. ವಯಸ್ಸು ಮಾನದಂಡವಾಗಿಸದೇ ಪ್ರತಿಯೊಬ್ಬರಿಗೂ ತಮ್ಮಲ್ಲಿರುವ ಸೂಪ್ತ ಪ್ರತಿಭೆ ಹೊರಹೊಮ್ಮವ ಸಕಾಲವಿದು. ನಿವೃತಿಯ ನಂತರದ ಸ್ವತಂತ್ರ ಬದುಕಿನಲ್ಲಿ ನಮ್ಮ ಪ್ರವೃತ್ತಿಯ ಮೂಲಕ ಇನ್ನಷ್ಟು ಪ್ರಕಾಶಮಾನರಾಗಿ ಜೀವನೋತ್ಸಾಹವನ್ನು ವೃದ್ಧಿಸಿಕೊಳ್ಳಬೇಕು ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಎಎಸ್ಎನ್ ಹೆಬ್ಬಾರ್ ಅವರು ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಂಗಣದಲ್ಲಿ ಬೈಂದೂರು ಹಿರಿಯ ನಾಗರೀಕರ ವೇದಿಕೆಯ ಈ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸರ್ಕಾರಿ, ಅರೆ ಸರ್ಕಾರಿ ಮತ್ತು ಸಂಘಟಿತ ವಲಯದ ಉದ್ಯೋಗಸ್ಥರಿಗೆ ನಿವೃತ್ತಿಯ ನಂತರದ ಬದುಕು ಹೊಸಲೋಕದ ಪರಿಚಯ ಮೂಡಿಸುತ್ತದೆ. ಕೆಲವರಿಗೆ ಅದು ಮಧುರವಾದರೆ ಇನ್ನು ಕೆಲವರಿಗೆ ಯಮಯಾತನೆಯಾಗಬಹುದು. ಇದೆಲ್ಲವೂ ಅವರವರು ಜೀವನವನ್ನು ಕಾಣುವ ಮತ್ತು ಸ್ವೀಕರಿಸುವ ವೈಖರಿಯಿಂದ ನಿರ್ಧಾರವಾಗುತ್ತದೆ ಎಂದರು.
ನಿರ್ಗಮನ ಅಧ್ಯಕ್ಷ ಕೆ. ಪುಂಡಲೀಕ ನಾಯಕ್ ನೂತನ ಅಧ್ಯಕ್ಷ ಗಿರೀಶ ಶ್ಯಾನುಭಾಗ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿವೃತ್ತ ಉಪನ್ಯಾಕ ಎಸ್. ಜನಾರ್ದನ ಮರವಂತೆ, ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಹೆಗ್ಡೆ, ಉಪಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ಈಶ್ವರ್, ನೂತನ ಖಜಾಂಚಿ ಸತೀಶ ವಾಮನ ಪೈ ಇದ್ದರು. ಕಾರ್ಯದರ್ಶಿ ಗೋವಿಂದ ಬಿಲ್ಲವ ವರದಿ ಮಂಡಿಸಿದರು. ಗೌರವಾಧ್ಯಕ್ಷ ಗೋವಿಂದ ಎಂ. ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ರಾಜೀವಿ ಎಂ. ವಂದಿಸಿದರು.
ಇಂದಿನ ಸಮುದಾಯವನ್ನು ಕಿರಿಯ, ಹಿರಿಯ ನಾಗರೀಕರು ಎಂದು ವರ್ಗೀಕರಿಸುವುದಕ್ಕಿಂತ ಮಾನಸಿಕವಾಗಿ ವೃದ್ಧರಾಗಿರುವ ತರುಣರನ್ನು ತರುಣ ವೃದ್ಧರು ಹಾಗೂ ಮಾನಸಿಕವಾಗಿ ತರುಣರಾಗಿರುವ ವೃದ್ಧರನ್ನು ವೃದ್ಧ ತರುಣರು ಎಂದು ವರ್ಗೀಕರೀಸುವುದೇ ಸೂಕ್ತ. ವೃದ್ಧಾಪ್ಯದಲ್ಲಿಯೂ ಕ್ರೀಯಾಶೀಲರಾಗಿ ಇರುವವರು ಆರೋಗ್ಯದಿಂದ ಇರುತ್ತಾರೆ ಎನ್ನುವುದನ್ನು ಹಿರಿಯ ನಾಗರೀಕರು ಮರೆಯಬಾರದು: ಮರವಂತೆ ನಿವೃತ್ತ ಉಪನ್ಯಾಸಕರಾದ ಎಸ್. ಜನಾರ್ದನ್















