ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ದಂಪತಿಗಳ ಜಯಂತೋತ್ಸವ ಆಚರಣೆ ಇತ್ತೀಚಿಗೆ ಸಂಭ್ರಮದಿಂದ ನಡೆಯಿತು.
ಉಡುಪಿ ಧರ್ಮ ಪ್ರಾಂತ್ಯದ ದಿವ್ಯ ಜ್ಯೋತಿ ನಿರ್ದೇಶಕ ಧರ್ಮ ಗುರು ಸೀರಿಲ್ ಲೋಬೊ, ಗಂಗೊಳ್ಳಿ ಚರ್ಚಿನ ಧರ್ಮ ಗುರು ಥಾಮಸ್ ರೋಶನ್ ಡಿಸೋಜ ನೇತೃತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ಬಳಿಕ ಮಾತನಾಡಿದ ಸೀರಿಲ್ ಲೋಬೊ, ಸುಖದಲ್ಲಿ ದುಃಖದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಸಹಕಾರವನ್ನು ನೀಡಿ ನಿಮ್ಮ ದಾಂಪತ್ಯ ಜೀವನವನ್ನು ನಿರ್ವಹಿಸಬೇಕೆಂದು ಸಂದೇಶ ನೀಡಿದರು.
ಥಾಮಸ್ ರೋಶನ್ ಡಿಸೋಜ ದಂಪತಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು. ದಂಪತಿಗಳು ವಿವಾಹದ ಪ್ರತಿಜ್ಞೆಯನ್ನು ಪುನಃ ಮಾಡಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಬ್ಯಾಂಡ್ ಮತ್ತು ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಕರೆದಯ್ಯಲಾಯಿತು. ಸಭಾಂಗಣದಲ್ಲಿ ದಂಪತಿಗಳಿಗೆ ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ನೆರವೇರಿಸಲಾಯಿತು. ಕೊಂಕಣಿ ಕ್ರೈಸ್ತ ಸಂಪ್ರದಾಯದ ಹಾಡುಗಳನ್ನು (ವೋವಿಯೋ ವೇರ್ಸ್) ಹಾಡಿ ಸಂಭ್ರಮಿಸಿದರು.
ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯ ಡಿಸೋಜ, ಕಾನ್ವೆಂಟಿನ ಸುಪೀರಿಯರ್ ಧರ್ಮಭಗಿನಿ ಡಯಾನ, ಕುಟುಂಬ ಆಯೋಗದ ಸಂಚಾಲಕ ಫೆಲಿಕ್ಸ್ ರೆಬೇರೊ ಹಾಗೂ ಕುಟುಂಬ ಆಯೋಗದ ಮತ್ತು ಜುಬಿಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ರೆನಿಟಾ ಬಾರ್ನೆಸ್ ಮತ್ತು ವಿನ್ಸಿಟಾ ಲೋಬೊ ಕಾರ್ಯಕ್ರಮ ನಿರೂಪಿಸಿ, ಧರ್ಮ ಭಗಿನಿ ಆನೆಟ್ ಸ್ವಾಗತಿಸಿ, ಫೆಲ್ಸಿ ಡಿಸಿಲ್ವ ವಂದಿಸಿದರು. ಒಟ್ಟು 43 ದಂಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.















