ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನುಷ್ಯರಲ್ಲಿ ಪರಿಪೂರ್ಣತೆಯನ್ನು ತರುವುದೇ ಶಿಕ್ಷಣ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ನೈತಿಕ ಮೌಲ್ಯಗಳಿಲ್ಲದ ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾರ್ಥಿಯಾಗಿಸುತ್ತಿದೆ. ಸಂಸ್ಕಾರವಿಲ್ಲದ ಶಿಕ್ಷಣ ಮನುಷ್ಯನಲ್ಲಿ ಗುರು ಹಿರಿಯರ ಅನಾದರ, ಧಾರ್ಮಿಕ ರಿವಾಜುಗಳ ಅವಹೇಳನ, ಸದಾ ಸ್ವಹಿತ ಚಿಂತನೆಗೆ ಪ್ರಾಮುಖ್ಯತೆ ನೀಡುವಂತೆ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮದ ಸವಿನೆನಪಿನ ನೂತನ ರಂಗಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮಹಾಪುರುಷರ, ಸಾಧಕರ ಬಾಲ್ಯವನ್ನು ಗಮನಿಸಿದಾಗ ಬಾಲ್ಯದ ಬದುಕು ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ವಿಷಯ ಗೊತ್ತಾಗುತ್ತದೆ. ಮಕ್ಕಳ ವಯಸ್ಸಿಗೆ ಅನುಗುಣವಾದ ಹಾಗೂ ಮುಂದೆ ಉತ್ತಮ ಬದುಕು ಕಟ್ಟಿಕೊಳ್ಳಲು ಬೇಕಾದಂತಹ ಅವಶ್ಯಕತೆಗಳಿಗೆ ಪೂರಕವಾದ ಶಿಕ್ಷಣ ದೊರೆಯಬೇಕು. ಜಾತಿ, ಧರ್ಮ, ಬದುಕು, ಪ್ರಾಣಕ್ಕಿಂತ ನನ್ನ ದೇಶ ದೊಡ್ಡದು ಎನ್ನುವಂತಹ ರಾಷ್ಟ್ರಭಕ್ತರ ನಿಮಾಣ ಕೇಂದ್ರಗಳು ಸ್ಥಾಪನೆಯಾಗಬೇಕು ಎಂದರು.
ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಎಸ್. ಷಡಾಕ್ಷರಿ ಸಮಾರಂಭ ಉದ್ಘಾಟಿಸಿದರು. ತಾಲೂಕು ರೈತಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ ಅವರು ತಾವು ಕೊಡುಗೆಯಾಗಿ ನೀಡಿದ ಶಾಲಾ ವಾಹನವನ್ನು ಹಸ್ತಾಂತರಿಸಿದರು. ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ ಸ್ವಸ್ತಿವಾಚನಗೈದರು.
ಕ್ಞೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ್, ಉದ್ಯಮಿ ಚಂದನ್ ಬಿಲ್ಲವ, ಪ್ರಾಶಾಶಿ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಗೋಳಿಹೊಳೆ ಗ್ರಾಪಂ ಮಾಜಿ ಅಧ್ಯಕ್ಷ ಮಂಜಯ್ಯ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಮೇಶ ಪೂಜಾರಿ, ಶತಮಾನೋತ್ಸವ ಸಮಿತಿ ಖಜಾಂಚಿ ಕೆ. ಎಂ. ಕೊಠಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕ ಓಂಗಣೇಶ್, ನಾಯಕಿ ಪ್ರಜ್ಞಾ ಇದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ವೈ. ಮಂಗೇಶ ಶ್ಯಾನುಭಾಗ್ ಸ್ವಾಗತಿಸಿ, ಶಿಕ್ಷಕ ಸದಾಶಿವ ಪ್ರಾಸ್ತಾವಿಸಿದರು. ಮುಖ್ಯಶಿಕ್ಷಕಿ ಪದ್ಮಾವತಿ ವರದಿ ಮಂಡಿಸಿದರು. ಉದಯ ಹುಲ್ಕಡಿಕೆ ನಿರೂಪಿಸಿದರು.