ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪರ: ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಸತಿಯುತ ಪ್ರೇರಣಾ ಶಿಬಿರದ ಉದ್ಘಾಟನಾ ಸಮಾರಂಭವು ಶಿರಸಿಯ ಲಯನ್ಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಶಿರಸಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಎಂ.ಎಸ್ ಪ್ರಸನ್ನಕುಮಾರ್ ಅವರು ಪ್ರೇರಣಾ ಶಿಬಿರ ಸಾಗಿ ಬಂದ ಹಾದಿಯ ಕುರಿತು ಮಾತನಾಡಿದರು. ಕಳೆದ ಬಾರಿಯ ವಾರ್ಷಿಕ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 39 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ಅತ್ಯುತ್ತಮ ಅಂಕಗಳೊಂದಿಗೆ ಗುರುತಿಸಿಕೊಂಡಿದ್ದು, ಈ ಪ್ರೇರಣಾ ಶಿಬಿರಕ್ಕೆ ಸಹಕರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳದ ಸಹಕಾರವನ್ನು ಸ್ಮರಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್ ರವರು ಎಸ್.ಎಸ್.ಎಲ್.ಸಿ.ಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಸಲುವಾಗಿ ವಿಶೇಷ ತರಬೇತಿ ನೀಡುವ ಈ ಪ್ರೇರಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಜನೆಯು ಪ್ರಾಮಾಣಿಕ ಪ್ರಯತ್ನ, ನಿರಂತರ ಶ್ರಮದ ನೆಲೆಯಲ್ಲಿ ಪ್ರಾಪ್ತ ವಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಎಸ್ ಹೆಗಡೆ, ಪ್ರಾಚಾರ್ಯರು, ಡಯಟ್ ಶಿರಸಿ ಅವರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಇಂತಹ ಪ್ರೇರಣಾ ಶಿಬಿರಗಳು ಪ್ರೇರಣೆಯಾಗಲಿ ಎಂದರು.
ಶಿರಸಿ ಉಪನಿರ್ದೇಶಕರ ಕಛೇರಿ ಶಿಕ್ಷಣಾಧಿಕಾರಿಗಳಾದ ಸದಾನಂದ ಸ್ವಾಮಿ, ಅವರು ವಿದ್ಯಾರ್ಥಿಗಳ ಪ್ರಯತ್ನ, ಶಿಕ್ಷಕರ ಪ್ರಯತ್ನದ ಜೊತೆ ಜೊತೆಗೆ ಪ್ರೇರಣ ಶಿಬಿರವು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಲಿದೆ ಎಂದರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಲೋಕೇಶ್ ಹೆಗಡೆ ಅವರು ಪ್ರೇರಣಾ ಶಿಬಿರದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮುರಾರಿ ಭಟ್, ವ್ಯವಸ್ಥಾಪಕರು, ರಾಮಕೃಷ್ಣ ಸ್ಟುಡೆಂಟ್ ಹೋಮ್, ಶಿರಸಿ, ಲಯನ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶಶಾಂಕ್ ಹೆಗಡೆ ರವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾ 6 ತಾಲೂಕಿನ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕ ಪೋಷಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಕಾರ್ಕಳದ ಪಿಆರ್ಓ ಲಿಶಾನ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.