ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಾಂಪ್ರದಾಯಿಕ ದಿನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯ ನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ಮಕ್ಕಳಿಗೆ ನಮ್ಮ ಸನಾತನ ಧರ್ಮದ ತತ್ವಗಳನ್ನು ತಿಳಿಸುವುದರ ಜೊತೆಗೆ ಎಲ್ಲರೂ ತಮ್ಮಲ್ಲಿ ಅವುಗಳನ್ನು ಅಳವಡಿಸಿ ಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ, ಉಳಿದ ಮಕ್ಕಳು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತಮ್ಮ ಗುರಿ ಸಾಧನೆಯನ್ನು ಸಾಕಾರ ಗೊಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ದಿನದ ಪ್ರಯುಕ್ತ ಸಿಹಿ ತಿಂಡಿ ವಿತರಿಸಲಾಯಿತು. ಪೋಷಕರಿಗಾಗಿ ಸಾಂಪ್ರದಾಯಿಕ ವಸ್ತು ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ವಿಶೇಷವಾಗಿ 2024ರ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ ಸಾನಿಧ್ಯಳನ್ನು ಗೌರವಪೂರ್ವಕವಾಗಿ ಪೋಷಕರ ಎದುರಿನಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹಶಿಕ್ಷಕಿ ಅಶ್ವಿನಿ ನಿರೂಪಿಸಿ, ವಂದಿಸಿದರು.