ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅವರವರು ಮಾಡಿದ ಕರ್ಮದ ಫಲವನ್ನು ಅವರವರೇ ಅನುಭವಿಸಬೇಕಾಗಿರುವ ಕಾರಣ ನಾವು ಕೆಟ್ಟ ಕರ್ಮಗಳನ್ನು ಎಂದಿಗೂ ಮಾಡಬಾರದು. ಏಕೆಂದರೆ ಕರ್ಮದ ಫಲ ತನ್ನ ವಿಳಾಸವನ್ನು ಎಂದಿಗೂ ಮರೆಯುವುದಿಲ್ಲ. ಎಂದು ಕೇರಳ ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಮೇಲ್ವಿಚಾರಕಿ ರಾಜಯೋಗಿನಿ ಬಿ. ಕೆ. ವಿಜಯಲಕ್ಷ್ಮೀ ಅವರು ಹೇಳಿದರು.
ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜೆಸಿಐ ಬೈಂದೂರು ಸಿಟಿ ಘಟಕದ ಈ ವರ್ಷದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.

ಓದಲು ಒಂದು ಕ್ಷಣ ಬೇಕಾಗುತ್ತದೆ. ಯೋಚನೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ. ತಿಳಿಯಲು ಒಂದು ದಿನ ಬೇಕಾಗುತ್ತದೆ. ಆದರೆ ಉಳಿಸಿಕೊಳ್ಳಲು ಪೂರ್ಣ ಜೀವನವೇ ಬೇಕಾಗುತ್ತದೆ ಅದೇ ವಿಶ್ವಾಸ. ಈ ನೆಲೆಯಲ್ಲಿ ಪರಸ್ಪರ ನಂಬಿಕೆ, ವಿಶ್ವಾಸದಿಂದ ಸಂಘಟನೆ ಮೂಲಕ ಯುವಜನರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯ ಮೌಲ್ಯ ರೂಪಿಸಿ ಸಮಾಜ ಸೇವಾ ಕಾರ್ಯ ಮಾಡುತ್ತಿರಿ ಎಂದರು.
ನಿರ್ಗಮಿತ ಅಧ್ಯಕ್ಷೆ ಅನಿತಾ ಆರ್. ಕೆ. ಇವರು ಸ್ವಾಗತಿಸಿ, ಗತವರ್ಷದ ವರದಿ ಮಂಡಿಸಿ ತಮ್ಮ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿ, 2025ನೇ ಸಾಲಿನ ನೂತನ ಅಧ್ಯಕ್ಷ ರಾಜು ಕೆ. ಮೊಗವೀರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ. ಎ., ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್, ಜೆಸಿಐ ನಿರ್ಗಮನ ಕಾರ್ಯದರ್ಶಿ ಗಣೇಶ ಪೂಜಾರಿ, ಶಿರೂರು ಜೆಸಿಐ ಪೂರ್ವಾಧ್ಯಕ್ಷ ಶಿರೂರು ಪ್ರಸಾದ ಪ್ರಭು ಲೇಡಿ ಜೆಸಿ ಅಧ್ಯಕ್ಷೆ ಕವಿತಾ ಎನ್. ಶೇಟ್ ಜೆಜೆಸಿ ಅಧ್ಯಕ್ಷ ಹರ್ಷಿತ್ ಎನ್. ಶೇಟ್ ಮೊದಲಾವರು ಉಪಸ್ಥಿತರಿದ್ದರು. ಟ್ನೂತನ ಕಾರ್ಯದರ್ಶಿ ರಾಘವೇಂದ್ರ ಬಿ. ವಂದಿಸಿದರು