ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಮಾತೃವಂದನಾ ಕಾರ್ಯಕ್ರಮವು ಇತ್ತೀಚಿಗೆ ನೆರವೇರಲ್ಪಟ್ಟಿತು.
ಬಾರ್ಕೂರಿನ ಖ್ಯಾತ ವಾಗ್ಮಿಗಳಾದ ಎನ್. ಆರ್. ದಾಮೋದರ ಶರ್ಮ ಅವರು ಈ ಕಾರ್ಯಕ್ರಮವನ್ನು ಸಾಂಗವಾಗಿ ನೆರವೇರಿಸಿಕೊಟ್ಟರು. ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ತೊಳೆದು, ಆರತಿ ಬೆಳಗಿ, ಗೌರವಿಸಿದರು.
ಈ ಸಂದರ್ಭದಲ್ಲಿ ಎನ್. ಆರ್. ದಾಮೋದರ ಶರ್ಮರು ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಭರತಭೂಮಿ ಕರ್ಮಭೂಮಿ, ಧರ್ಮಭೂಮಿ, ಸಾಧನಭೂಮಿಯೆಂದು ವೇದೇತಿಹಾಸಗಳು ಸಾರಿ ಸಾರಿ ಹೇಳುತ್ತಿವೆ. ಏಕೆಂದರೆ ಇಲ್ಲಿ ಜಾತರಾದವರು ಭಾವ ರಾಗ ತಾಳಗಳಿಂದ ಕೂಡಿದ ಜೀವನ ನಡೆಸುತ್ತಾರೆ. ಈಗಿನ ಭಾರತ ಮುಂದೆ ಹೀಗೇ ಮುಂದುವರಿಯಬೇಕಾದರೆ ಉತ್ತಮ ಗುಣಮಟ್ಟದ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಹುಟ್ಟುಹಾಕುವುದು ಅತ್ಯಗತ್ಯ ಎಂದರು.
ಮಕ್ಕಳಿಗೆ ಭಾರತೀಯ ಪರಂಪರೆಯ ಬಗ್ಗೆ ಸರಿಯಾದ ಜ್ಞಾನವನ್ನು ನೀಡಬೇಕು. ಇತಿಹಾಸದ ಪ್ರಜ್ಞೆ ಬೇಕು. ಯಾವಾತನು ಇತಿಹಾಸವನ್ನು ಚೆನ್ನಾಗಿ ಅರಿಯುತ್ತಾನೋ ಅವನು ಭದ್ರವಾದ ಭವಿಷ್ಯಕ್ಕೆ ನಾಂದಿಯನ್ನಿಡುತ್ತಾನೆ. ಮಕ್ಕಳು ಮಾತೃದೇವೋ ಭವ ಎಂಬ ವಾಕ್ಯದ ಅರ್ಥವನ್ನು ಅರಿತಿರಬೇಕು. ಯಾವುದೇ ಮಹತ್ಕಾರ್ಯ ಸಾಧಿಸಿದರೂ ಆತ ತಾಯಿಗೆ ಮಗನೇ. ಮಕ್ಕಳ ಸಾಧನೆಯಲ್ಲಿ ತಾಯಿಯ ಪಾತ್ರ, ಪ್ರೇರಣೆ, ಉತ್ತೇಜನ ಇದ್ದೇ ಇರುತ್ತದೆ. ಯುದ್ಧಕ್ಕೆ ಸಾಗಿದ ಸೈನಿಕ, ದೋಣಿ ಒಯ್ದ ನಾವಿಕ, ಹೆರಿಗೆಗೆ ಹೋದ ಹೆಣ್ಣುಮಗಳು ಮರಳಿ ಬಂದೇ ಬರುತ್ತಾರೆ ಎನ್ನುವುದರಲ್ಲಿ ಖಚಿತತೆ ಇರುವುದಿಲ್ಲ.
ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮನ್ನು ಹಡೆದಳು ನಮ್ಮಮ್ಮ. ಅವಳು ನಮಗೆ ದೇವರಾಗದಿರುವಳೇ? ತಂದೆ ತಾಯಿಯರಲ್ಲಿ ದೇವರನ್ನು ಕಾಣುವ ಶ್ರವಣಕುಮಾರನ ಭಕ್ತಿ ನಮಗೆಲ್ಲ ಮಾದರಿಯಾಗಿದೆ. ಬೀಸುವ ಗಾಳಿ, ನಿಂತ ನೆಲ, ಉಣ್ಣುವ ಅನ್ನ ಪ್ರತಿಯೊಂದರಲ್ಲೂ ದೇವರನ್ನು ಕಾಣುವ ನೆಲ ನಮ್ಮದು. ಮಕ್ಕಳು ತಂದೆತಾಯಿಯಲ್ಲೂ ದೇವರನ್ನು ಕಾಣಬೇಕು. ಮಕ್ಕಳ ನಗುವಿನಲ್ಲೇ ಅಪ್ಪ ಅಮ್ಮನ ಸುಖ ಅಡಗಿದೆ. ಮಕ್ಕಳು ಅಪ್ಪ ಅಮ್ಮ ತಲೆ ತಗ್ಗಿಸುವ ಕೆಲಸಗಳನ್ನು ಎಂದಿಗೂ ಮಾಡಬಾರದು.
ಅಪ್ಪ ಅಮ್ಮ ಹಾಕಿದ ಗೆರೆ ಎಂದೂ ದಾಟಬಾರದು. ಬಾಹ್ಯ ಆಕರ್ಷಣೆಗಳಿಗೆ ಒಳಗಾಗಿ ಬದುಕನ್ನು ಹಾಳುಗೆಡವಿಕೊಳ್ಳಬಾರದು. ಕ್ಷಣಿಕ ಸುಖಕ್ಕೆ ಬಲಿಯಾಗಿ ಸುಂದರ ಬದುಕನ್ನು ನರಕ ಮಾಡಿಕೊಳ್ಳಬಾರದು. ವಿದ್ಯೆಕೊಟ್ಟಗುರು, ಅನ್ನ-ಆಶ್ರಯ-ವಿದ್ಯೆ ನೀಡಿದ ಸಂಸ್ಥೆಯನ್ನು ಎಂದೂ ಮರೆಯಬಾರದು. ಎಂದು ಕಿವಿಮಾತು ನುಡಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಸ್ಥೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರ ಧರ್ಮಪತ್ನಿ ರಮಾದೇವಿ ಆರ್ ಭಟ್, ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಹಾಗೂ ಎಲ್ಲಾ ಶಿಕ್ಷಕ- ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದರು.