ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ಬನ್ನಾಡಿ ನಾರಿಬೆಟ್ಟು ದಿ| ಕಿಶೋರ್ ಹೆಗ್ಡೆ ಸಂಸ್ಮರಣೆ ಕಾರ್ಯಕ್ರಮ ‘ಕಿಶೋರ ನೆನಪು’ ನಡೆಯಿತು.
ದಿ| ಕಿಶೋರ್ ಹೆಗ್ಡೆ ಅವರು ಶ್ರೀ ಸಿದ್ದೇಶ್ವರ ಯಕ್ಷರಂಗ, ಬನ್ನಾಡಿ ಇದರ ಪ್ರಧಾನ ಕಲಾವಿದರಾಗಿದ್ದರು. ಯಕ್ಷಗಾನದ ಕೆಲವು ವಿಶಿಷ್ಟ ಪಾತ್ರಗಳಿಗೆ ತನ್ನ ಮಾತಿನ ವೈಖರಿ ಹಾಗೂ ರಂಗ ನಡೆಯ ಮೂಲಕ ಜೀವ ತುಂಬಿದವರು. ಹವ್ಯಾಸಿ ಕಲಾವಿದರಲ್ಲಿ ಕಿಶೋರ್ ಹೆಗ್ಡೆ ಮರೆಯಲಾಗದ ಚೇತನ ಎಂದು ಯಕ್ಷ ಗುರು ಗೋವಿಂದ ಉರಾಳರು ಸಂಸ್ಮರಣೀಯ ನುಡಿಗಳ ನಾಡಿದರು.
ಒ.ಎನ್.ಜಿ.ಸಿ. ಗೋವಾ ಇಲ್ಲಿನ ನಿವೃತ್ತ ಚೀಫ್ ಮ್ಯಾನೇಜರ್ ನಾರಾಯಣ ಆಚಾರ್ ಬನ್ನಾಡಿ ಶಾಲಾ ದಿನಗಳಲ್ಲಿ ಸಹಪಾಠಿಯಾಗಿದ್ದ ಕಿಶೋರ್ ಹೆಗ್ಡೆ ಅವರ ಕಲಾ ಪ್ರತಿಭೆಯನ್ನು ಕೊಂಡಾಡಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ದಿ| ಕಿಶೋರ್ ಹೆಗ್ಡೆ ಅವರ ಜೊತೆ ಯಕ್ಷಗಾನದಲ್ಲಿ ವೇಷ ಮಾಡಿದ ಅನುಭವಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸಿದರು.
ಮಧುವನ ವಿವೇಕ ಯಕ್ಷರಂಗದ ಅಧ್ಯಕ್ಷ, ನಿವೃತ್ತ ಶಿಕ್ಷಕ ಗುಲ್ವಾಡಿ ರವೀಂದ್ರನಾಥ ಶೆಟ್ಟಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೈಲ್ಕೆರೆಯ ಮುಖ್ಯ ಶಿಕ್ಷಕ ವಡ್ಡರ್ಸೆ ಸಂತೋಷ್ ಕುಮಾರ್ ಶೆಟ್ಟಿ, ಶಿಬಿರಾಧಿಕಾರಿ ದೀಪಾ ಪೂಜಾರಿ ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲ ಹಾಗೂ ಶಿಬಿರಾಧಿಕಾರಿ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕ ಶ್ರದ್ಧಾ ಆರ್. ಕಾರ್ಯಕ್ರಮ ನಿರೂಪಿಸಿದರು.