ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶ್ರಿ ಕಾಳವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ವಾರ್ಷಿಕ ವಿಶೇಷ ಶಿಬಿರವು ಸೌಕೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟಕರಾಗಿ ಆಗಮಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭುಜಂಗ ಶೆಟ್ಟಿ ಅವರು ಶ್ರಮ ವಿದ್ಯೆ ಬುದ್ಧಿ ಜ್ಞಾನ ಕೌಶಲ್ಯ ಇತ್ಯಾದಿಗಳನ್ನು ಸಮಾಜದ ದೇಶದ ಒಳಿತಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಮನೋಭಾವದಿಂದ ನೀಡುವ ಸಹಾಯವೇ ಸೇವೆ. ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು, ಮಾನವೀಯ ಸಂಬಂಧಗಳನ್ನು, ಸಮಯ, ಪಾಲನೆ, ಶಿಸ್ತುಗಳನ್ನು ಕಲಿಸುತ್ತದೆ. ಸೇವೆ ಮತ್ತು ಸಹಬಾಳ್ವೆಯ ಪಾಠವನ್ನು ವಿದ್ಯಾರ್ಥಿಗಳು ಈ ಶಿಬಿರದಿಂದ ಕಲಿಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಅವರು ಎನ್.ಎಸ್.ಎಸ್. ನ ಧ್ಯೇಯ ಧೋರಣೆಗಳು ಬದುಕಿನಲ್ಲಿ ಧನಾತ್ಮಕ ಬದಲಾವಣೆಗೆ ಪೂರಕವಾದ ಅಂಶಗಳು ಎಂದರು. ಬದುಕನ್ನು ಅರ್ಥಪೂರ್ಣಗೊಳಿಸಲು ಶಿಬಿರದಲ್ಲಿ ಕಲಿತ ಪಾಠಗಳು ವಿದ್ಯಾರ್ಥಿಗಳ ಬದುಕಿನಲ್ಲಿ ದಾರಿದೀಪವಾಗಬಹುದು ಎಂದು ಹೇಳಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು. ಅವರು ಶಿಬಿರದಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳು ಮತ್ತು ಕಲಿಯಬೇಕಾದ ಕೌಶಲಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಸ್ಕರ್, ಅಧ್ಯಕ್ಷರು ಎಸ್. ಡಿ. ಎಂ. ಸಿ. ಸರ್ಕಾರಿ ಪ್ರಾಥಮಿಕ ಶಾಲೆ ಸೌಕೂರು ಅವರು ಶುಭ ಹಾರೈಸಿದರು. ಘಟಕ 1 ಮತ್ತು 2 ರ ಸಂಯೋಜನಾಧಿಕಾರಿಗಳಾದ ರೋಹಿಣಿ ಮತ್ತು ನಿರಂಜನ ಶರ್ಮಾ, ಕಾಲೇಜಿನ ಉಪನ್ಯಾಸಕರಾದ ಡಾ. ಶೇಖರ ಬಿ., ಮನೋಹರ್ ಉಪ್ಪುಂದ, ರಂಜಿತ್, ಅನುಷಾ ಎಲ್, ತೇಜೇಶ್ ಕುಮಾರ್ ಎ.ಎಲ್, ಕಿರಣ್ ವಿಷ್ಣು ಪಟಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘಟಿಸಿದ ಎನ್. ಎಸ್. ಎಸ್. ವಿದ್ಯಾರ್ಥಿ ಪ್ರತಿನಿಧಿಗಳಾದ ರಾಘವೇಂದ್ರ ಶೆಟ್ಟಿ ಹಾಗೂ ದೀಪಶ್ರಿ ಅವರು ಉಪಸ್ಥಿತರಿದ್ದರು.
ಸ್ವಯಂ ಸೇವಕರಾದ ವೈಷ್ಣವಿ ಕಾರ್ಯ ಕ್ರಮ ನಿರೂಪಿಸಿದರು, ಪ್ರದೀಪ್ ಧನ್ಯವಾದ ಅರ್ಪಿಸಿದರು.















