ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ. ನಿಜ ಜೀವನದ ದುಮ್ಮಾನಗಳನ್ನು ಬಿಂಬಿಸುವ ನಾಟಕಗಳು ಬದುಕಿನ ಅರಿವು ಮೂಡಿಸುತ್ತವೆ. ರಂಗಭೂಮಿಯು ಮನುಷ್ಯನ ಬಗೆ ಬಗೆಯ ಮುಖಗಳನ್ನು ಬಯಲು ಮಾಡುವ ಏಕೈಕ ಮಾಧ್ಯಮ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಲಾವಣ್ಯ ಬೈಂದೂರು ಇದರ 48ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ. ಕೆ. ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025ರ ಐದು ದಿನಗಳ ರಂಗೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯವಾಗಿದೆ. ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ. ಇಂದಿನ ಪೀಳಿಗೆ ಕಲೆಯನ್ನು ಮುಂದುವರಿಸುತ್ತಾರೋ ಬಿಡುತ್ತಾರೋ ಎಂಬುದಕ್ಕಿಂತ ಅವುಗಳು ಅವರ ಮನಸ್ಸಿನೊಳಕ್ಕೆ ಹೊಕ್ಕು ಕೂರುತ್ತದೆ. ಅಂತಹ ಕೆಲಸ ನಡೆಸುವುದು ಬಹುಮುಖ್ಯವಾದುದು. ಈ ನೆಲೆಯಲ್ಲಿ ಜಿಲ್ಲೆಯ 90 ಶಾಲೆಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಪಂಜರದ ಗಿಣಿಗಳಂತೆ ಪೋಷಿಸಿ ದುಡಿಮೆಗೆ ಸೀಮಿತಗೊಳಿಸಿ ಬೆಳೆಸಿದರೆ ಅವರ ಬದುಕು ನಿಸ್ಸಾರವಾಗುತ್ತದೆ. ಅವರನ್ನು ಸಾಂಸ್ಕೃತಿಕವಾಗಿಯೂ ಸಂಪನ್ನರನ್ನಾಗಿಸಲು ಸಂಗೀತ, ನೃತ್ಯ, ನಾಟಕದಂತಹ ಕಲೆಗಳಲ್ಲೂ ತೊಡಗಿಸಬೇಕು ಎಂದರು.
ಉತ್ತಮ ಹೈನುಗಾರ ರಾಜ್ಯಪ್ರಶಸ್ತಿ ಪುರಸ್ಕೃತ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಅಭಿನಂದನೆ ಹಾಗೂ ಹಿರಿಯ ಮದ್ದಳೆಗಾರ ನಾರಾಯಣ ದೇವಾಡಿಗ ಮತ್ತು ಕೊಂಕಣಿ ರಂಗ ಕಲಾವಿದ ಜೋಸೆಫ್ ಫೆರ್ನಾಂಡೀಸ್ ಇವರನ್ನು ಸನ್ಮಾನಿಸಲಾಯಿತು. ಬಾಡ ಪ್ರವೀಣ್ ಶೆಟ್ಟಿ ಶುಭಾಶಂಸನೆಗೈದರು. ಎಸ್. ರಾಜು ಪೂಜಾರಿ, ರಾಜಾರಾಮ ಭಟ್, ಕೃಷ್ಣಯ್ಯ ಮದ್ದೋಡಿ, ಸತೀಶ ಶೆಟ್ಟಿ ಸೂರ್ಕುಂದ, ಭರತ್ ದೇವಾಡಿಗ, ರಂಗ ಎಸ್. ಇದ್ದರು. ರಾಜೇಶ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್. ವಿಶ್ವನಾಥ ಆಚಾರ್ಯ ವಂದಿಸಿದರು. ನಾಗರಾಜ ಪಿ. ನಿರೂಪಿಸಿದರು.