ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಿಗೆ ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ನಾಟಕಗಳ ಬಗ್ಗೆ ಆಸಕ್ತಿ ಮೂಡಿಸಬೇಕು, ಇವುಗಳಿಂದ ಮಾತ್ರ ಅವರ ಮನಸ್ಸು ಅರಳಲು ಸಾಧ್ಯವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ಬೈಂದೂರು ಆಶ್ರಯದಲ್ಲಿ ನಡೆದ ಮಾಜಿ ಶಾಸಕ ದಿ. ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ಇದರ 48ನೇ ವರ್ಷದ ವಾರ್ಷಿಕೋತ್ಸವ, ರಂಗಪಂಚಮಿ – 2025 ರಂಗೋತ್ಸವ ಇದರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಲಾವಣ್ಯ ಸಂಸ್ಥೆಯ ಬೈಂದೂರು ಭಾಗದ ಜನರಿಗೆ ನಾಟಕಗಳ ಬಗ್ಗೆ ಅಭಿರುಚಿ ಮೂಡಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಗೆ ಗಳಿಸಿದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಈ ಸಂಸ್ಥೆ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಪ್ರಬುದ್ದ ಕಲಾವಿದರ ತಂಡವಾಗಿರುವ ಲಾವಣ್ಯ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಮಹೋನ್ನತವಾದ ಸಾಧನೆಯಾಗಿದೆ. ಆಧುನಿಕತೆಯ ಬದಲಾವಣೆಗಳೊಂದಿಗೆ ರಂಗಭೂಮಿ ತನ್ನ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನೆಡೆಯಬೇಕಾಗಿದೆ ಎಂದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಕಾರಿ ವಿಷ್ಣು ಆರ್. ಪೈ ಅಧ್ಯಕ್ಷತೆ ವಹಿಸಿದ್ದರು.
ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್, ಉದ್ಯಮಿಗಳಾದ ಶ್ರೀಧರ ಪೂಜಾರಿ, ಜಗದೀಶ ಶೆಟ್ಟಿ ಕುದ್ರುಕೋಡು, ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಬೈಂದೂರು ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಗಿರೀಶ್ ಶ್ಯಾನುಭಾಗ್, ಬೈಂದೂರು ಡಾ. ಬಿ.ಆರ್.ಆಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಭಾಸ್ಕರ, ಹಿನ್ನೆಲೆ ರಂಗ ಕಲಾವಿದ ಯು. ರಾಜ್‌ಗೋಪಾಲ ವೈದ್ಯ ಬೈಂದೂರು, ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಭಾಗವತ ಅಣ್ಣಪ್ಪ ದೇವಾಡಿಗ ಬಿಜೂರು, ಸಂಗೀತ ನಿರ್ದೇಶಕ ಗೀತಂ ಗಿರೀಶ್, ಗಾಯಕಿ ಪೂರ್ಣಿಮಾ ವಿ.ಪೈ ಹಾಗೂ ಹಿರಿಯ ರಂಗ ಕಲಾವಿದ ಗಣೇಶ ಕಾರಂತ್ ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.
ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಉಡುಪಿ ಶುಭಾಶಂಸನೆಗೈದರು. ಲಾವಣ್ಯದ ಮಾಜಿ ಅಧ್ಯಕ್ಷ ಗಣಪತಿ ಎಸ್. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೈತ್ರಾ ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು. ಉದಯ ಆಚಾರ್ಯ ಬೈಂದೂರು ವಂದಿಸಿದರು.