ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ,ಎಡ್ ಪ್ರಶಿಕ್ಷಣಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿ ಸದಸ್ಯರಾದ ಡಾ. ಆಸೀಫ್ ಬ್ಯಾರಿ “ಗೌರವಾನ್ವಿತ ಶಿಕ್ಷಕ ವೃತ್ತಿಯನ್ನು ತಾವು ಆಯ್ದುಕೊಂಡಿರುವುದಕ್ಕೆ ನೀವು ಅದೃಷ್ಟ್ಶಾಲಿಗಳು, ಏಕೆಂದರೆ ಶಿಕ್ಷಕರಾಗುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಈ ಸುಂದರ ಕಡಲ ತೀರ ಪರಿಸರದಲ್ಲಿ ಉತ್ತಮ ಶಿಕ್ಷಣ ಪಡೆದು ನೀವು ಉತ್ತಮ ಶಿಕ್ಷಕರಾಗಿ. ನಿಮ್ಮಲ್ಲಿ ಶಿಸ್ತು ಮತ್ತು ಸಂಶೋಧನಾ ಪ್ರವೃತ್ತಿಗಳನ್ನು ಬೆಳೆಸಿಕೊಂಡು ನಮ್ಮಲ್ಲಿರುವ ಸಂಪನ್ಮೂಲ ಉಪನ್ಯಾಸಕರನ್ನು ಬಳಸಿಕೊಂಡು ದೇಶದ ಸತ್ಪ್ರಜೆಗಳಾಗಿ. ಅಂದರೆ ಶಿಲ್ಪಿಯು ಕಲ್ಲು ಬಂಡೆಯಿಂದ ಬೇಡವಾದ ಭಾಗವನ್ನು ತೆಗೆದು ಹಾಕಿ ಸುಂದರ ಮೂರ್ತಿಯನ್ನು ಕೆತ್ತುವ ಹಾಗೆ ನೀವು ನಿಮ್ಮ ಮನಸ್ಸಿನಿಂದ ಬೇಡವಾದ ಕೆಟ್ಟ ವಿಚಾರಗಳನ್ನು ತೆಗೆದುಹಾಕಿ ಸುಂದರವಾದ ಬದುಕನ್ನು ಕಟ್ಟಿಕೊಂಡು ಹೋಗಿ” ಎಂದು ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಅನುದಾನಿತ ಕನ್ನಡ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ. ಜಯಶೀಲಶೆಟ್ಟಿ ಅವರು “ಶಿಕ್ಷಕ ಎಂಬವನು ಶಿವನ ಸ್ವರೂಪಿ ಕ್ಷಕಿರಣವಾಗಿ ವಿದ್ಯಾರ್ಥಿಗಳಲ್ಲಿರುವ ಕತ್ತಲೆಯನ್ನು ಹೋಗಲಾಡಿಸುವನಾಗಿರುತ್ತಾನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.”
“ನಿಮ್ಮನ್ನು ನೀವು ಅರಿಯಬೇಕು ವಿದ್ಯಾರ್ಥಿಗಳನ್ನು ಆಂತರಿಕವಾಗಿ ಅರ್ಥಮಾಡಿಕೊಳ್ಳಬೇಕು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಲಾಗಿರುವ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನದಲ್ಲಿ ಭಾಗವಹಿಸಿ ಕಲುಷಿತ ಸಮಾಜವನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛಂದ ಸಮಾಜವನ್ನು ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮುಖ್ಯಸ್ಥರಾದ ಡಾ. ಪೂರ್ಣಿಮಾ . ಟಿ, ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಪ್ಪ ಕೆ. ಎಸ್. ಅವರು “ವಿದ್ಯಾರ್ಥಿಯಾಗಿ ಶಿಕ್ಷಕ ನಿರಂತರವಾಗಿ ಕಲಿಯುತ್ತಿರಬೇಕು, ಶಿಕ್ಷಕ ವೃತ್ತಿ ಪವಿತ್ರವಾದದ್ದು ಅದನ್ನು ನೀವು ಸ್ವೀಕರಿಸಿದ್ದೀರಿ ನೀವು ಕಲಿತ ಜ್ಞಾನವನ್ನು ವಿದ್ಯಾರ್ಥಿಗಳ ಮಟ್ಟಕ್ಕಿಳಿದು ವಿಷಯವನ್ನು ಅರ್ಥೈಸಿ ಕಲಿಸಬೇಕು” ಎಂದು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನಾಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ದಾಖಲಾತಿ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಕೆ. ಪಿ., ಬ್ಯಾರೀಸ್ ಪದವಿ ಕಾಲೇಜಿನ ಗಣಕ ವಿಭಾಗದ ಮುಖ್ಯಸ್ಥರಾದ ನೂತನ್ ಎಸ್., ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಿಯಾನ, ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನ ಉಪಪ್ರಾಂಶುಪಾಲೆ ಜೆನ್ನಿಫರ್ ಲೂಯಿಸ್ ಹಾಗೂ ಬಿ.ಎಡ್ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಿರ್ದೋಸ್ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ವೆಂಕಟೇಶ್ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಶ್ರುತಿ ವಂದಿಸಿದರು.















