ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘ ರಿ. ಇದರ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವು ಬಂಕೇಶ್ವರದ ರಾಜರಾಜೇಶ್ವರಿ ಸಭಾಭವನದಲ್ಲಿ ಸತ್ಯನಾರಾಯಣ ಪೂಜೆಯೊಂದಿಗೆ ನಡೆಯಿತು.
ವಾರ್ಷಿಕ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ನಾಗೇಂದ್ರ ಕುಮಾರ್ ನೆರವೆರಿಸಿದರು.



ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮೋಹನ್ ರೇವಣಕರ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಸೂರಜ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮಂಜುನಾಥ್ ರೇವಣಕರ್ ಮಾತನಾಡಿ, ಬೈಂದೂರಿನಲ್ಲಿ ದೈವಜ್ಞ ಬ್ರಾಹಣ ಸಮುದಾಯವು ಸಂಘಟಿತರಾಗಿ ಸಮೂದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯ ನೆರವು ನೀಡಲು ತಾನು ಸದಾ ಸಿದ್ದನಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧನೆಗೈದ ಆರು ಮಂದಿ ಸ್ವರ್ಣ ಕುಶಲಕರ್ಮಿಗಳನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಎಸ್ಎಸ್ಎಲ್‌ಸಿ, ಪಿಯುಸಿ ಮತ್ತು ಪದವಿಯ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು ಮತ್ತು ಕ್ರೀಡಾ ಸಾಧಕರಿಗೆ ಬಹುಮಾನವನ್ನು ವಿತರಿಸಲಾಯಿತು. ಇಬ್ಬರು ಸಮಾಜದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.



ದೈವಜ್ಞ ಮಹಿಳಾ ಸಂಘದ ಅಧ್ಯಕ್ಷೆ ವಿದ್ಯಾ ಅಶೋಕ್ ಶೇಟ್, ಗೌರವಾಧ್ಯಕ್ಷರಾದ ಕೃಷ್ಣಮೂರ್ತಿ ಶೆಟ್ ಶಿರೂರು, ಉಪಾಧ್ಯಕ್ಷರಾದ ಅಶೋಕ್ ಶೇಟ್ ನಾಗೂರು, ಖಜಾಂಚಿ ಯು ವೆಂಕಟೇಶ್ ಶೇಟ್, ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಎನ್. ಶೆಟ್, ಸಂಘದ ಕಾರ್ಯದರ್ಶಿ ನಾಗರಾಜ್ ಶೇಟ್ ಉಪ್ಪುಂದ, ಉಪಸ್ಥಿತರಿದ್ದರು.
ಬಳಿಕ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಅಧ್ಯಕ್ಷರಾಗಿ ಸತೀಶ್ ಶೇಟ್ ಉಪ್ಪುಂದ ಅವರಿಗೆ ಮೋಹನ್ ರೇವಣಕರ್ ಅವರು ಪದ ಪ್ರದಾನಗೈದರು. ಕಾರ್ಯದರ್ಶಿಯಾಗಿ ನರೇಂದ್ರ ಶೆಟ್ ಅಧಿಕಾರ ವಹಿಸಿಕೊಂಡರು ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಪದ ಪ್ರದಾನಗೈದರು.
ಸಂಘದ ವಾರ್ಷಿಕ ವರದಿಯನ್ನು ಖಜಾಂಜಿ ಯು. ವೆಂಕಟೇಶ್ ಶೇಟ್ ವಾಚಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ಬೈಂದೂರು ಕೆ. ರವೀಂದ್ರ ಶೆಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೂಪ ರೇವಣಕರ್ ಪ್ರಾರ್ಥನೆ ಮಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿ, ಕಾರ್ಯದರ್ಶಿ ಬೈಂದೂರು ನರೇಂದ್ರ ಶೇಟ್ ಸ್ವಾಗತಿಸಿ, ಧನ್ಯವಾದಗೈದರು.