ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸೆಸೆಲ್ಸಿ ಪರೀಕ್ಷಾ ಕೇಂದ್ರದ ಕೋಣೆಯ ಬಾಗಿಲಿನ ಬೀಗ ಒಡೆದು, ಸಿಸಿ ಕೆಮರಾಗಳನ್ನು ಒಡೆದು ಹಾಕಿರುವ ಘಟನೆ ಗುರುವಾರದಂದು ನಡೆದಿದೆ.
ಮಾ. 21ರಂದು ನಡೆಯುವ ಪರೀಕ್ಷೆಗೆ ತರಗತಿಯ ಕೋಣೆಗಳನ್ನು ಸಿದ್ಧಗೊಳಿಸಲಾಗಿತ್ತು. ಈ ಬಾರಿ ನಕಲು ತಡೆಗಟ್ಟಲು ಕಾಲೇಜು ವಠಾರ ಹಾಗೂ ಕೋಣೆಗಳಿಗೆ ಸಿಸಿ ಕೆಮರಾ ಅಳವಡಿಸಲಾಗಿತ್ತು. ಮಾ.20ರಂದು ರಾತ್ರಿ ಸುಮಾರು 9.30 ರಿಂದ 10 ಗಂಟೆ ಹೊತ್ತಿಗೆ ಮುಸುಕುಧಾರಿಗಳು ಕಾಲೇಜಿನ ಆವರಣ ಪ್ರವೇಶಿಸಿ, ಅಲ್ಲಿ ಅಳವಡಿಸಿದ್ದ ಕೆಮರಾ ಕಿತ್ತೆಸೆದು ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿದ್ದಾರೆ. ಅನಂತರ ಪರೀಕ್ಷಾ ಕೇಂದ್ರದ ಕೋಣೆಯ ಬಾಗಿಲಿನ ಬೀಗ ಒಡೆದು, ಒಳಗೆ ನುಗ್ಗಿದ್ದಾರೆ. 4 ಕೋಣೆಗಳಿಗೆ ಹೋಗಿ 5 ಕೆಮರಾಗಳನ್ನು ಧ್ವಂಸ ಮಾಡಿದ್ದಾರೆ.ಜಾಕೆಟ್ ಧರಿಸಿದ್ದ ಮೂವರು ಮುಸುಕು ಧರಿಸಿ ಆವರಣ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು 15 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಕೋಣೆಗಳಿಗೆ ಸಿಸಿ ಕೆಮರಾ ಇದ್ದರೂ ಆರೋಪಿಗಳು 4 ಕೋಣೆಗಳಿಗೆ ನುಗ್ಗಿ ಸಿಸಿ ಕೆಮರಾ ಒಡೆದು ಹಾಕಿದ್ದಾರೆ.
ಉಪ ಪ್ರಾಂಶುಪಾಲೆ ಚೈತ್ರಾ ಶೆಣೈ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.