ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದ ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸಿದರೆ ಅವರು ಸತ್ಪ್ರಜೆಗಳಾಗಿ ದೇಶಕ್ಕೆ ಬಲು ದೊಡ್ಡ ಕೊಡುಗೆಯನ್ನು ನೀಡುವ ಸಾಮರ್ಥ್ಯ ಹೊಂದುತ್ತಾರೆ. ಶಿಶು ಮಂದಿರದಲ್ಲಿ ಮಕ್ಕಳಿಗೆ ಇಂತಹ ವಿಷಯಗಳಿಗೆ ಪೂರಕವಾದ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸುತ್ತಿವೆ ಎಂದು ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಶಿಶು ಮಂದಿರದ ಮಕ್ಕಳ ಶುಭ ವಿದಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಶು ಮಂದಿರದಲ್ಲಿ ತಮ್ಮ ಮಕ್ಕಳಂತೆ ಅವರ ಲಾಲನೆ ಪಾಲನೆ ಮಾಡಿ ಶಿಕ್ಷಣ ನೀಡುತ್ತಿರುವ ಮಾತಾಜಿಯವರ ಶ್ರಮ ಶ್ಲಾಘನೀಯ. ಮಕ್ಕಳಿಂದ ಪೋಷಕರೂ ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿದು ಕೊಳ್ಳುವಂತಾಗಿದ್ದು, ಇಂತಹ ಬದಲಾವಣೆಗೆ ಕಾರಣವಾಗಿರುವ ಶಿಶು ಮಂದಿರದ ಶಿಕ್ಷಣ ಸ್ತುತ್ಯಾರ್ಹವಾದುದು ಎಂದು ಹೇಳಿದರು.
ಎನ್.ಪ್ರಕಾಶ್ ನಾಯಕ್ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಕೃಷ್ಣಮೂರ್ತಿ ಕಿಣಿ ಶುಭ ಹಾರೈಸಿದರು. ಶಿಶು ಮಂದಿರದ ಮಾಜಿ ಅಧ್ಯಕ್ಷೆ ಸವಿತಾ ಎನ್. ದೇವಾಡಿಗ ಮಾತನಾಡಿದರು.
ಇದೇ ಸಂದರ್ಭ ಶಿಶು ಮಂದಿರದಲ್ಲಿ ಕಲಿತು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಬೇರೆ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಿಶು ಮಂದಿರದ ಸದಸ್ಯರಾದ ವಿಜಯಶ್ರೀ ವಿ.ಆಚಾರ್ಯ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಮಾತಾಜಿ ರತ್ನ ಮೊದಲಾದವರು ಉಪಸ್ಥಿತರಿದ್ದರು.
ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಶು ಮಾಜಿ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ. ಪೈ ವಂದಿಸಿದರು.