ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಜ್ಞಾನವು ತಂತ್ರಜ್ಞಾನ ಅಭಿವೃದ್ಧಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನ ತಂತ್ರಜ್ಞಾನ ಪ್ರಗತಿಯ ಹಿಂದೆ ವಿಜ್ಞಾನಿಗಳ ಪರಿಶ್ರಮ ಮತ್ತು ನಾವೀನ್ಯತೆ ಅಡಕವಾಗಿದೆ. ಭವಿಷ್ಯದಲ್ಲಿ ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ ಮುಂತಾದ ಕ್ಷೇತ್ರಗಳು ನವ್ಯತೆಯ ಹೊಸ ಮಾರ್ಗಗಳನ್ನು ತೆರೆಯಲಿವೆ ಎಂದು ಮಣಿಪಾಲ್ ಇನ್‌ಸ್ಟಿಟ್ಯುಟ್ ಆಫ್ ಟೆಕ್ನಾಲಜಿ (ಎಂ.ಐ.ಟಿ.) ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗುರುಮೂರ್ತಿ ಎಸ್. ಸಿ. ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದ ಆವಿಷ್ಕಾರರಾಗಬೇಕೆಂದು ಪ್ರೇರೇಪಿಸಿದರು.
ಐಕ್ಯೂಎಸಿ ಸಂಚಾಲಕರಾದ ನಾಗರಾಜ ಯು., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನಾಗರಾಜ ವೈದ್ಯ ಎಂ., ವಿಜ್ಞಾನ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಭೂಮಿಕಾ ಹಾಗೂ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ವರ್ಣಿತಾ ನಿರೂಪಿಸಿ, ವಿಜ್ಞಾನ ಸಂಘದ ಸಂಚಾಲಕಿ ಅನುಷಾ ಎಲ್. ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಕರಾದ ರಂಜಿತ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ಕಾರ್ಯಾಗಾರ ಹಾಗೂ ವಿಜ್ಞಾನ ಮಾದರಿ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.