ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾವೆಲ್ಲರೂ ತಿನ್ನುತ್ತಿರುವ ಆಹಾರದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಎಷ್ಟು, ಏನು, ಯಾವಾಗ, ಮತ್ತು ಯಾವುದನ್ನು ತಿನ್ನಬೇಕು ಎಂಬುವುದು ಬಹಳ ಮುಖ್ಯ ಹಾಗೂ ನಮ್ಮ ಆರೋಗ್ಯದ ಸೂಚ್ಯಂಕಗಳೆಂದು ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ. ಹೆಚ್. ಪ್ರಭಾಕರ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಮಾರ್ಗದರ್ಶನದಲ್ಲಿ ಕಾಲೇಜಿನ ವಿಜ್ಞಾನ ಕ್ಲಬ್ ಮತ್ತು ಇಕೋ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ʼನಾವೇನನ್ನ ತಿನ್ನುತ್ತಿದ್ದೇವೆʼ ಎಂಬ ಶಿರ್ಷಿಕೆ ಅಡಿಯಲ್ಲಿ ಆಹಾರ ಮತ್ತು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಮಾತಾನಾಡುತ್ತಾ, ಅದರ ಬಯಸುವ ಆಹಾರಕ್ಕಿಂತ ಉದರ ಬಯಸುವ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು. ಈ ರೀತಿಯ ಆಹಾರ ಕ್ರಮ ಜೀವನ ಕ್ರಮವಾಗಿ ರೂಪುಗೊಳ್ಳಬೇಕು. ಇಂದಿನ ವೇಗದಿಂದ ಕೂಡಿದ ಬದುಕಿನಲ್ಲಿ ಫಾಸ್ಟ್ ಫುಡ್ ಗೆ ಒಗ್ಗಿಕೊಂಡರೆ, ಅನಾರೋಗ್ಯದ ಬದುಕನ್ನು ಬದುಕ ಬೇಕಾದೀತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ಪ್ರಾಧ್ಯಾಪಕರುಗಳಾದ ರಂಜಿತ್ ಹಾಗೂ ಅನುಷಾ ಎಲ್. ಉಪಸ್ಥಿತರಿದ್ದರು.
ಇಕೋ ಕ್ಲಬ್‌ನ ಸಂಚಾಲಕರಾದ ನಾಗರಾಜ ಯು. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೈಷ್ಣವಿ ಮತ್ತು ತಂಡ ಪ್ರಾರ್ಥಿಸಿ, ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿನಿ ಐಶಾ ನಿದಾ ನಿರೂಪಿಸಿ, ಗಣಕ ವಿಜ್ಞಾನ ಉಪನ್ಯಾಸಕಿ ಅಮಿತಾ ಕೆ.ವಿ. ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಲಿತಾ ವಂದಿಸಿದರು.