ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ರಿ. ಆಶ್ರಯದಲ್ಲಿ ಸಾಹಿತಿ ಕೆ. ಪ್ರಭಾಕರನ್ ಅವರು ಮಲಯಾಳಂನಿಂದ ಅನುವಾದಿಸಿದ ಮೂರು ಕೃತಿಗಳ ಅವಲೋಕನ ಕಾರ್ಯಕ್ರಮ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬರಹಗಾರ್ತಿ, ಅನುವಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕೆ. ಪ್ರಭಾಕರನ್ ಅನುವಾದಿಸಿದ ‘ಯಮುನಾನದಿಯ ತೀರದಲ್ಲಿ ‘ ಕುರಿತು ಮಾತನಾಡಿ, ಮಲೆಯಾಳದ ಪ್ರಸಿದ್ದ ಕಥೆಗಾರ ಎಂ. ಮುಕುಂದನ್ ಅವರ ಕೃತಿಗಳ ವೈಶಿಷ್ಟ್ಯಗಳ ಕುರಿತು ಮೂಲ ಮಲೆಯಾಳದಲ್ಲಿ ಇ.ಎಂ.ಅಶ್ರಫ್ ಬರೆದ ಪುಸ್ತಕ ಇದು. ಎಂ. ಮುಕುಂದನ್ ಅವರ ಕೆಲವು ಕಾದಂಬರಿಗಳಲ್ಲಿ ಕಾಣುವ ಮಾದಕ ದ್ರವ್ಯ ವ್ಯಸನ ಮತ್ತು ಲೈಂಗಿಕ ವಿಚಾರಗಳ ಕುರಿತು ಮಲೆಯಾಳದ ಓದುಗರು ವ್ಯಕ್ತ ಪಡಿಸಿದ ಆಕ್ಷೇಪಗಳ ಹಿನ್ನೆಲೆಯಲ್ಲಿ ಆ ಕಾದಂಬರಿಗಳು ಹುಟ್ಟಿದ ಜಾಗವಾದ ದೆಹಲಿ ಮತ್ತು ಹರಿದ್ವಾರಗಳಿಗೆ ಮುಕುಂದನ್ ಜತೆಗೆ ಹೋಗಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸನ್ನಿವೇಶಗಳನ್ನು ಚಿತ್ರಿಸುವಲ್ಲಿ ಈ ಕೃತಿ ಹುಟ್ಟಿಕೊಂಡಿದೆ ಎಂದರು.
ಅಸ್ತಿತ್ವವಾದಿ ನೆಲೆಯಲ್ಲಿ ರಚಿತವಾದ ‘ದೆಹಲಿ’ ಮತ್ತು ‘ಹರಿದ್ವಾರದಲ್ಲಿ ಗಂಟೆಗಳು ಮೊಳಗುತ್ತಿವೆ’ ಎಂಬ ಎರಡು ಕಾದಂಬರಿಗಳು ಹುಟ್ಟಿಕೊಂಡ ಕಾಲ ಮತ್ತು ದೇಶಗಳಿಗೆ ಅಶ್ರಫ್ ಮತ್ತು ಮುಕುಂದನ್ ಮಾಡಿದ ಮರುಪಯಣದ ವಿವರಗಳು ಇಲ್ಲಿವೆ. ಪರಸ್ಪರ ವಿರುದ್ಧ ಸ್ವಭಾವಗಳ ದೆಹಲಿ ಎಂಬ ಮಹಾನಗರ ಮತ್ತು ನದಿ-ವನ-ಕಾಡುಗಳಿಂದ ಆವೃತವಾಗಿರುವ ಹರಿದ್ವಾರಗಳು ಬದಲಾದ ಸನ್ನಿವೇಶಗಳಲ್ಲಿ ಮೂಲಭೂತವಾಗಿ ಬದಲಾಗದ ಮನುಷ್ಯರೊಂದಿಗೆ ಇಲ್ಲಿ ಕಾಣಸಿಗುತ್ತವೆ ಎಂದರು.

ಡಾ. ಜಯಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಮತ್ತೊಂದು ಅನುವಾದ ಕೃತಿ ‘ಆಕ್ರಮಣ ಕಾಲದ ಪ್ರೇಮ ಮತ್ತು ಇತರ ಕಥೆಗಳ’ ಕುರಿತು ಹೇಳುತ್ತಾ, ವಸ್ತು ಮತ್ತು ಅನುಭವಗಳ ಬೆರಗು ಹುಟ್ಟಿಸುವ ಲೋಕದ ಜೊತೆ ಅಷ್ಟೇ ಖಚಿತವಾದ ತಾತ್ವಿಕ ಬಿತ್ತಿಯನ್ನು ಹೊಂದಿರುವ ಈ ಕಥೆಗಳಿಗೆ ಒಂದಿಷ್ಟೂ ಊನವಾಗದಂತೆ ಪ್ರಭಾಕರನ್ ನಡೆಸಿದ ಅನುವಾದದ ಅನುಸಂದಾನ ಅವುಗಳನ್ನು ಕನ್ನಡದ ಓದುಗ ಲೋಕಕ್ಕೂ ಆಪ್ತವಾಗುವಂತೆ ಮಾಡಿವೆ ಎಂದರು.
ಉದಯ ಗಾoವ್ಕರ್ ಅವರು ‘ಸೈಬರ್ ಮೆಟ್ರಿಮೋನಿ 2025 ಮತ್ತು ಇತರ ಕಥೆಗಳು’ ಕುರಿತು ಹೇಳುತ್ತಾ ಇದು 18 ಕಥೆಗಳುಳ್ಳ ಒಂದು ಸಂಕಲನ. ಈ ಸಂಕಲನದ ಕರ್ತೃವಾದ ಸುರೇಶ್ ಅವರು ಮೂಲತ: ತಮಿಳುನಾಡಿನವರು. ಈ ಸಂಕಲನದ ಹೆಚ್ಚಿನ ಕಥೆಗಳು ಲಘು ತಮಾಷೆಯ ದಾಟಿಯಿಂದ ಬರೆಯಲ್ಪಟ್ಟಿವೆ. ನವಿರು ಹಾಸ್ಯ ಈ ಎಲ್ಲಾ ಕಥೆಗಳ ನಿರೂಪಣೆಯ ಮೂಲ ವಿಧಾನವಾದರೂ ಆ ನವಿರು ಹಾಸ್ಯದೊಳಗೆ ಗಂಭೀರವಾದ ಸವಾಲುಗಳನ್ನು ಮತ್ತು ಮನುಷ್ಯ ಲೋಕದ ಸಂಕಟಗಳನ್ನು ಆ ಎಲ್ಲ ಕಥೆಗಳು ಹೇಳುತ್ತವೆ. ಪ್ರತಿ ಕಥೆಯಲ್ಲೂ ಬಹಳ ಗಂಭೀರವಾದ ಸಮಸ್ಯೆಯನ್ನು ತಮಾಷೆಯ ಧೋರಣೆಯಲ್ಲಿ ಕಥೆಗಾರ ಶೋಧಿಸುತ್ತಾ ಹೋಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಜಿ.ವಿ.ಕಾರಂತ್ ಅವರು ವಹಿಸಿದ್ದರು. ರಂಗ ನಿರ್ದೇಶಕ ಸತ್ಯನಾ ಕೊಡೇರಿ ಅವರು ವಿಶ್ವ ರಂಗಭೂಮಿ ದಿನದ ಸಂದೇಶ ವಾಚನ ಮಾಡಿದರು.
ಸಮುದಾಯ ಕುಂದಾಪುರದಲ್ಲಿ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಸಮುದಾಯದ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು, ಕುಂದಾಪುರ ಸಮುದಾಯದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಉಪಸ್ಥಿತರಿದ್ದು, ಪ್ರಾಸ್ತಾವಿಕ ಮಾತುಗಳ ಜೊತೆಗೆ, ಸಾಹಿತಿ ಕೆ. ಪ್ರಭಾಕರನ್ ಅವರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ಬರಹಗಾರರು, ಸಾಹಿತಿಗಳು, ಚಿಂತಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಮುದಾಯದ ಸಂಗಾತಿಗಳು ಉಪಸ್ಥಿತರಿದ್ದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು.