ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ನಮ್ಮೊಳಗಿನ ಸಂತೋಷ, ನೋವು, ಹತಾಶೆಯನ್ನು ಪ್ರಕಟಿಸುವ ಪ್ರಬಲ ಮಾಧ್ಯಮ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಕೇವಲ ಹವ್ಯಾಸವಾಗಿ ಉಳಿಯದೇ ಅದೊಂದು ಸಾಮಾಜಿಕ ಬದ್ಧತೆಯಾಗಿರಬೇಕು ಎಂದು ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಹೇಳಿದರು.
ಅವರು ಗುರುವಾರ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಲಾದ ರಂಗ ಸಂವಾದ ಹಾಗೂ ರಂಗ ಗೀತೆಗಳ ಗಾಯನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇಂದು ಹೇಳಬೇಕಾದ್ದನ್ನು ಹೇಳಲು ಸಾಧ್ಯವಾಗದ ವಾತಾವರಣವಿದೆ. ಪ್ರತಿಭಟನೆಯ ರೂಪಕವಾಗಿ ಹುಟ್ಟಿಕೊಂಡ ರಂಗಭೂಮಿ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತಿದೆ. ಅಂತರ್ಜಾಲದ ಪ್ರಭಾವದಿಂದಾಗಿ ಸುಳ್ಳು ಮಾಹಿತಿಗಳೇ ತಮ್ಮ ಸುತ್ತಲೂ ತುಂಬಿವೆ. ಅದು ರಂಗಭೂಮಿಯನ್ನು ವ್ಯಾಪಿಸಿಕೊಂಡಿದೆ. ಇಲ್ಲಿ ತೊಡಗಿಸಿಕೊಂಡಿರುವ ಹಿರಿಯರನ್ನು ಬದಲಿಸಲು ಸಾಧ್ಯವಿಲ್ಲದಿರಬಹುದು ಆದರೆ ಮಕ್ಕಳು ನಮ್ಮ ನಾಳೆಗಳ ಭರವಸೆಯಾಗಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.

ಸುರಭಿ ರಿ. ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ರೋಟರಿ ವಲಯ 1ರ ನಿಯೋಜಿತ ಸಹಾಯಕ ಗವರ್ನರ್ ಐ. ನಾರಾಯಣ್ ಉಪಸ್ಥಿತರಿದ್ದರು. ಹಿರಿಯ ರಂಗ ಕಲಾವಿದ ವಿ.ಹೆಚ್. ನಾಯಕ್ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು.
ಸುರಭಿ ಪೂರ್ವಾಧ್ಯಕ್ಷ ಸತ್ಯನಾ ಕೊಡೇರಿ ರಂಗ ಸಂವಾದ ನಿರ್ವಹಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷ ಭಾಸ್ಕರ ಬಾಡ ಸನ್ಮಾನಿತರನ್ನು ಪರಿಚಯಿಸಿದರು. ರೋಟರಿ ಕಾರ್ಯದರ್ಶಿ ಸುನಿಲ್ ಬೈಂದೂರು ವಂದಿಸಿದರು. ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸುರಭಿ ಕಲಾವಿದರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು.