ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ಬಳ್ಕೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತರು ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎಂದು ಗುರುತಿಸಲಾಗಿದೆ.

ಕಂಡ್ಲೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬಸ್ರೂರು ಸಮೀಪದ ಬಿ. ಎಚ್. ನಿಂದ ಕಂಡ್ಲೂರಿನತ್ತ ತೆರಳುತ್ತಿದ್ದ ಸ್ಕೂಟಿ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸವಾರರಿಬ್ಬರು ದೂರಕ್ಕೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಹಾಗೂ ಬೈಕ್ ನಜ್ಜುಗುಜ್ಜಾಗಿದೆ.
ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪೊಲೀಸರು ಹಾಗೂ ಹೈವೇ ಪಟ್ರೋಲ್ ಸಿಬ್ಬಂದಿ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಪೊಲೀಸ್ ನಿರೀಕ್ಷಕ ನಂಜಪ್ಪ ಗ್ರಾಮಾಂತರ ಠಾಣೆ ಪಿಎಸ್ಐ ನೂತನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.