ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಈ ಪ್ರಯುಕ್ತ ಪಂಚಾಂಗ ಶ್ರವಣ ಕಾರ್ಯ ಜರುಗಿತು.
ಸಂಸ್ಥೆಯ ಸಂಸ್ಕೃತ ಅಧ್ಯಾಪಕರಾದ ರಾಮಕೃಷ್ಣ ಉಡುಪರು ಪಂಚಾಗ ಪೂಜೆಯನ್ನು ನೆರವೇರಿಸಿ ಮಾತನಾಡುತ್ತಾ ಕಾಲವೇ ಎಲ್ಲವನ್ನು ನಡೆಸಿಕೊಂಡು ಹೋಗುತ್ತದೆ. ’ಲಲಾಟಲಿಖಿತಾ ರೇಖಾ ಪರಿಮಾರ್ಷ್ಟುನ ಶಕ್ಯತೇ’ ಎಂಬಂತೆ ಭಗವಂತನು ತನ್ನಿಷ್ಟದಂತೆ ಜಗತ್ತನ್ನು ನಡೆಸಿಕೊಂಡು ಹೋಗುತ್ತಾನೆ. ಅವನ ಆಟದ ಬೊಂಬೆಗಳು ನಾವು. ಅವನ ಇಚ್ಛೆ ಇಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲಾರದು ಎಂಬೆಲ್ಲ ಮಾತುಗಳು ಕಾಲಪುರುಷನ ಮಹತ್ವವನ್ನು ತಿಳಿಸುತ್ತವೆ.
ವೇದಗಳ ಅರ್ಥವನ್ನರಿಯಬೇಕಾದರೆ ವೇದಾಂಗಗಳ ಜ್ಞಾನ ಅಗತ್ಯ. ಅವುಗಳಲ್ಲಿ ಒಂದು ಜ್ಯೋತಿಶ್ಶಾಸ್ತ್ರ. ಆಕಾಶದಲ್ಲಿರುವ ನಕ್ಷತ್ರ ಗ್ರಹಗಳ ಚಲನವಲನಗಳ ಲೆಕ್ಕಾಚಾರದಂತೆ ದಿನದ ಸ್ಪಷ್ಟ ಮಾಹಿತಿಗಳೇ ಪಂಚಾಂಗ. ಭಾರತೀಯ ಪರಂಪರೆಯಂತೆ ವರ್ಷದ ಬದಲಾವಣೆಯನ್ನು ಯುಗಾದಿ ಶಬ್ದದಿಂದ ಕರೆದು ಆಚರಿಸಿಕೊಂಡು ಬಂದಿದ್ದೇವೆ.
ಪ್ರಕೃತಿಯೂ ಕೂಡ ಹೊಸತನವನ್ನು ಕಾಣುವ ಸಮಯವಾದ್ದರಿಂದ ಇದು ಮಹತ್ವವನ್ನು ಪಡೆದುಕೊಂಡಿದೆ. ಸಿಂಹಾವಲೋಕನ ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ಗುರಿಗಳ, ಮಾರ್ಗಗಳ ನಿರ್ಣಯವೂ ಅಮೂಲ್ಯ. ನಮ್ಮ ಮುಂದಿನ ಒಂದು ವರ್ಷದಲ್ಲಿ ಘಟಿಸಬಹುದಾದ ಸಾಮಾನ್ಯ ಫಲಗಳ ವಿಮರ್ಶೆ ನಡೆಸಿ, ಶುಭಫಲಗಳ ಪುಷ್ಟಿಗೆ, ಅಶುಭಫಲಗಳ ನಾಶಕ್ಕೆ ಬೇಕಾಗುವ ಸಕಲ ಸಿದ್ಧತೆಗಳೊಂದಿಗೆ ಮನೋದಾರ್ಢ್ಯವನ್ನು ಹೊಂದಲು ಫಲಜ್ಯೋತಿಷ್ಯ ಸಹಕಾರಿಯಾಗಿದೆ ಎನ್ನುತ್ತಾ ಸಂವತ್ಸರಾದಿಫಲಗಳನ್ನು, ರಾಶಿಫಲಗಳನ್ನು ತಿಳಿಸಿದರು. ಯುಗಾದಿಯ ವಿಶೇಷ ಖಾದ್ಯವಾದ ಬೇವುಬೆಲ್ಲವನ್ನು ಎಲ್ಲರೂ ಹಂಚಿ ತಿಂದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ., ಉಪಪ್ರಾ೦ಶುಪಾಲರಾದ ರಾಮ ದೇವಾಡಿಗ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.