ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮುಹಿಯುದೀನ್ ಜುಮಾ ಮಸ್ಜಿದ್ ಹೆನ್ನಾಬೈಲ್ ಇಲ್ಲಿಯ ಈದ್ಗಾ ಮೈದಾನದಲ್ಲಿ ಈದುಲ್ ಫಿತರ್ ಪ್ರಾರ್ಥನೆ ನೆರವೇರಿಸಿ, ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ಕೋರಿದರು.
ಪ್ರಾರ್ಥನೆಯ ನೇತೃತ್ವ ವಹಿಸಿದ ಧರ್ಮಗುರು ಮೌಲಾನಾ ಮುಹಮ್ಮದ್ ಹಫೀಜ್ ರಜ್ವಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಂಜಾನ್ ಇಸ್ಲಾಮಿಕ್ ಧಾರ್ಮಿಕತೆಯ ಅತ್ಯಂತ ಕ್ರಿಯಾಶೀಲ ಮಾಸ. ಉಪವಾಸ, ಗ್ರಂಥ ಪಾರಾಯಣ, ದಾನ, ಆರಾಧನೆಯ ಪರಮೋಚ್ಚ ಅಭಿವ್ಯಕ್ತಿ. ಈ ಅಭಿವ್ಯಕ್ತಿಯಿಂದಲೇ ಮನುಷ್ಯನೊಬ್ಬನ ವ್ಯಕ್ತಿತ್ವ ಮತ್ತು ಭಕ್ತಿ ಪರಿಪೂರ್ಣಗೊಳ್ಳುತ್ತದೆ. ಇಂದು ಜಗತ್ತು ದೈಹಿಕ ಮತ್ತು ಮಾನಸಿಕವಾಗಿ ಹಿಂದೆಂದಿಗಿಂತ ಹೆಚ್ಚು ರೋಗಗ್ರಸ್ತವಾಗಿರಲು ಧಾರ್ಮಿಕತೆಯಿಂದ ದೂರ ಸರಿದದ್ದೇ ಮುಖ್ಯ ಕಾರಣ.
ಪ್ರಸ್ತುತ ಜಗತ್ತಿನಲ್ಲಿ ಸ್ವಾರ್ಥಕ್ಕಾಗಿ ಧರ್ಮ ರಾಜಕೀಯದಲ್ಲಿದೆ ಬಿಟ್ಟರೆ ನೈಜ ಆಚರಣೆ ಮತ್ತು ಅಳವಡಿಕೆಯಲ್ಲಿ ಇಲ್ಲ. ಧರ್ಮದ ಆಚರಣೆ ಸೂಕ್ತ ಮತ್ತು ಸದೃಢವಾಗಿ ಜೀವಪರವಾಗಿ ಕಾಣಿಸದೆ ಇದ್ದಾಗ ಧರ್ಮದ ವಿಚಾರಗಳ ಮೇಲೆ ಅಪಚಾರ ಮತ್ತು ಅಪಪ್ರಚಾರಗಳು ನಡೆಯುತ್ತವೆ. ಹೀಗಾಗಿ, ಧಾರ್ಮಿಕರಾದವರು ಧರ್ಮವನ್ನು ಸರಿಯಾಗಿ ಪ್ರತಿನಿಧಿಸುವ ಮತ್ತು ಆಚರಿಸುವ ಮಹತ್ವ ಹಾಗೂ ಅಗತ್ಯವನ್ನು ಅರಿಯಬೇಕು. ಇಸ್ಲಾಂ ಧರ್ಮದ ಯಾವ ಆಚರಣೆಯೂ ಕೂಡ ಜೀವ ಪ್ರಪಂಚಕ್ಕೆ ಮತ್ತು ಪ್ರಾಕೃತಿಕ ನೀತಿಗಳಿಗೆ ವಿರುದ್ಧವಾಗಿಲ್ಲ. ಧರ್ಮವು ಸಮಸ್ತ ಮನುಕುಲಕ್ಕೆ ಮಾರ್ಗದರ್ಶಿ ಎಂದು ಹೇಳಿದರು.
ಸಭೆಯಲ್ಲಿ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಸೈಯದ್ ರಫೀಕ್, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಸೈಯದ್ ಅಬ್ಬಾಸ್, ಹಸನ್ ಸಾಹೇಬ್, ಅಲಿಯಬ್ಬ ತೋಟದಮನೆ, ಇಬ್ರಾಹಿಂ ಸೈಯದ್, ಹಯಾತ್ ಭಾಷಾ, ಅಲ್ತಾಫ್ ಅಲಿ, ಬಾವಾ ಸಾಹೇಬ್, ಅಷ್ಫಾಕ್ ಸಾಬ್ಜನ್, ಆರೀಫ್ ಹಮೀದ್, ಆದಮ್ ಸಾಹೇಬ್, ಅಮಾನ್ ಜಮಾಲ್, ಅಶ್ರಫ್ ಕೋಟೇಶ್ವರ, ಅರ್ಷದ್ ಅಬ್ಬಾಸ್, ಶಬ್ಬೀರ್ ಸಾಹೇಬ್, ರಝಾಕ್ ಸಾಹೇಬ್, ಅಬ್ಬಾಸ್ ಅಲಿ ಮುಂತಾದವರು ಉಪಸ್ಥಿತರಿದ್ದರು.