ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 2024-25ನೇ ಸಾಲಿನಲ್ಲಿ 677 ಕೋಟಿ ರೂ. ವ್ಯವಹಾರ ನಡೆಸಿದ್ದು, 1.14 ಕೋಟಿ ರೂ. ನಿವ್ವಳ ಲಾಭ ಗಳಿಸಿ, ನಿರಂತರ ಕಳೆದ 4ನೇ ವರ್ಷಗಳಿಂದ 1ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ತಿಳಿಸಿದ್ದಾರೆ.
ಸಂಘದ ವಾರ್ಷಿಕ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ. 17 ಏರಿಕೆ ಕಂಡಿದೆ. 3 ಶಾಖೆಗಳನ್ನು ಹೊಂದಿರುವ ಸಂಘವು ವರ್ಷಾಂತ್ಯಕ್ಕೆ 85.56 ಕೋಟಿ ರೂ. ಠೇವಣಿ, 82 ಕೋಟಿ ರೂ. ಸದಸ್ಯರ ಸಾಲ, 2.66 ಕೋಟಿ ರೂ. ಪಾಲು ಬಂಡವಾಳ, 5.96 ಕೋಟಿ ರೂ. ಲಾಭದಿಂದ ವಿಂಗಡಿಸಿದ ನಿಧಿಗಳನ್ನು ಹೊಂದಿದ್ದು, ಹಾಗೂ 24.53 ಕೋಟಿ ರೂ. ಸಹಕಾರಿ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಲಾಗಿದೆ. ವರ್ಷಾಂತ್ಯಕ್ಕೆ 100 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಉಡುಪಿ ಜಿಲ್ಲೆಯ ಪ್ರಥಮ ಸೌಹಾರ್ದ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
1920ರಲ್ಲಿ ದಿ. ಹಟ್ಟಿಯಂಗಡಿ ಲಕ್ಷ್ಮೀನಾರಾಯಣ ಕಾಮತ್ ಅವರಿಂದ ಸ್ಥಾಪನೆಯಾದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2014 ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಗೆ ಪಾತ್ರವಾಗಿದೆ. ಸಂಘದ ಎಲ್ಲಾ 3 ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ಅಳವಡಿಸಲಾಗಿದ್ದು, ಮೊಬೈಲ್ ಆಪ್ ಮೂಲಕ ಪಿಗ್ಮಿ ಸಂಗ್ರಹಣೆ ಮಾಡಿದ ಹಾಗೂ ಸದಸ್ಯರ ಎಲ್ಲಾ ವ್ಯವಹಾರಗಳ ವಿವರಗಳಿಗೆ ವಾಟ್ಸಪ್ ಸಂದೇಶ
ಕಳುಹಿಸಿದ ಜಿಲ್ಲೆಯ ಪ್ರಥಮ ಸಹಕಾರ ಸಂಘವೆಂಬ ಹೆಗ್ಗಳಿಕೆಗೂ ಸಂಘವು ಪಾತ್ರವಾಗಿದೆ ಎಂದು ಅವರು ಹೇಳಿದರು.
ಬ್ಯಾಂಕಿಂಗ್ ವ್ಯವಹಾರದೊಂದಿಗೆ ಸಾರ್ವಜನಿಕ ಉಪಕಾರ ನಿಧಿಯಿಂದ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಪರಿಸರದ ಜನರ ಮನ್ನಣೆ ಪಡೆದಿರುವ ಸಂಘವು ತ್ವರಿತಗತಿಯ ಗ್ರಾಹಕ ಸೇವೆಗೆ ಹೆಸರುವಾಸಿಯಾಗಿದೆ.