ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ರೆಡ್‌ಕ್ರಾಸ್ ಘಟಕದ ಸಭಾಪತಿಗಳಾಗಿದ್ದ ಬಸ್ರೂರು ರಾಜೀವ್ ಶೆಟ್ಟಿ ಅವರು ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾಗಿರುತ್ತಾರೆ.
ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಚುನಾವಣೆ ನಡೆದಿದ್ದು, ರಾಜ್ಯ ಕರ್ನಾಟಕ ಸರಕಾರದ ಹಣಕಾಸು ಕಾರ್ಯದರ್ಶಿಗಳಾದ ಡಾ. ವಿಶಾಲ್ ಆರ್. ಅವರನ್ನು ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಕರ್ನಾಟಕದ ರಾಜ್ಯಪಾಲರು ಚುನಾವಣಾಧಿಕಾರಿಯಾಗಿ ನೇಮಕ ಮಾಡಿದ್ದರು.
ಚುನಾವಣೆಯಲ್ಲಿ 30 ಜಿಲ್ಲೆಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಭಾಗವಹಿಸಿದ್ದು, ಅಂತಿಮವಾಗಿ ಬಸ್ರೂರು ರಾಜೀವ್ ಶೆಟ್ಟಿ ಅವರು ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಡಾ. ವಿಶಾಲ್ ಅವರು ರಾಜೀವ್ ಶೆಟ್ಟಿ ಅವರಿಗೆ ಪ್ರಮಾಣ ಪತ್ರ ನೀಡಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಘಟಕದ ಡಾ. ಶ್ರೀನಿವಾಸ ಹ್ಯಾಟಿ ಅವರನ್ನು ಉಪಸಭಾಪತಿಗಳಾಗಿ ಆಯ್ಕೆ ಮಾಡಲಾಯಿತು.
ರಾಜೀವ್ ಶೆಟ್ಟಿ ಅವರು ಈ ಹಿಂದೆ ಎರಡು ಬಾರಿ ರಾಜ್ಯ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು. ಲಯನ್ಸ್ ಜಿಲ್ಲಾ ಗವರ್ನರ್‌ರಾಗಿ, ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್ಮೆನ್‌ರಾಗಿ ಸೇವೆ ಸಲ್ಲಿಸಿದ್ದಾರೆ. ವಿಕಲಚೇತನ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷರಾಗಿಯೂ ಈಗ ಕಾರ್ಯ ನಿರ್ವಹಿಸುತ್ತಿದ್ದಾರೆ.