ಕುಂದಾಪ್ರ ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದೆ: ಸಮಾಲೋಚನಾ ಸಭೆಯಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಜಿಲ್ಲೆಯ ಅರ್ಧ ಭಾಗಕ್ಕಿಂತ ಹೆಚ್ಚು ಭಾಗದ ಜನರು ಮಾತನಾಡುವ ಕುಂದಾಪ್ರ ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದೆ. ಈ ಭಾಷೆಗೆ ಸೊಗಡಿದೆ, ಸಂಸ್ಕೃತಿ ಇದೆ. ನಮ್ಮ ಅಬ್ಬಿ ( ತಾಯಿ ) ಭಾಷಿಯ ಹಿರಿತನ ಹಾಗೂ ಪರಂಪರೆಯನ್ನು ಉಳಿಸಿ-ಬೆಳೆಸುವ ಕೆಲಸ, ಕುಂದಾಪ್ರ ಕನ್ನಡ ಮಾತನಾಡುವ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಮಂಗಳೂರು ವಿ.ವಿಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

Call us

Click Here

ಅವರು ಹೋಟೇಲ್ ಯುವಮನೀಶ್ ಸಭಾಂಗಣದಲ್ಲಿ ಗುರುವಾರ ಸಂಜೆ ಮಂಗಳೂರು ವಿ.ವಿ ಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಆಯ್ದ ಸಂಘಟನೆಗಳ ಪ್ರತಿನಿಧಿಗಳ ಕುಂದಾಪ್ರ ಭಾಷಿಕರೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾಷಾ ಅಧ್ಯಯನ ಜೊತೆಯಲ್ಲಿ ಸಂಸ್ಕೃತಿ ಹಾಗೂ ಪರಂಪರೆಯ ಅಧ್ಯಯನಗಳು ನಡೆಯಬೇಕು. ಅಧ್ಯಯನ ಪೀಠಗಳು ಕೇವಲ ವಿಶ್ವ ವಿದ್ಯಾಲಯದ ಆವರಣಕ್ಕೆ ಸೀಮಿತವಾಗದೆ, ಭಾಷೆಯನ್ನು ಮಾತನಾಡುವ ಭಾಷಿಕರೊಂದಿಗೆ ಮುಕ್ತವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡಾಗ ಮಾತ್ರ ಸರ್ಕಾರಗಳ ಪೀಠ ಸ್ಥಾಪನೆಯ ಉದ್ದೇಶಗಳು ಸಾರ್ಥಕವಾಗುತ್ತದೆ. ನಮ್ಮ ತಾಯಿ ಭಾಷೆಯಾದ ಕುಂದಾಪ್ರ ಕನ್ನಡವನ್ನು ಮಾತನಾಡುವಾಗ ಯಾವುದೇ ಹಿಂಜರಿಕೆ ಇರಬಾರದು.

ಮನೆಯಲ್ಲಿ, ಶಾಲೆಯಲ್ಲಿ, ಕಾರ್ಯಕ್ರಮಗಳಲ್ಲಿ ಸಾಧ್ಯವಾದರೇ, ಉದ್ಯೋಗ ಸ್ಥಳಗಳಲ್ಲಿಯೂ ನಮ್ಮವರೊಂದಿಗೆ ಅಬ್ಬಿ ಭಾಷೆಯನ್ನು ಮಾತನಾಡುವುದನ್ನು ರೂಢಿಯಾಗಿರಿಸಿಕೊಳ್ಳಬೇಕು. ಭಾಷಾ ಬೆಳವಣಿಗೆಯ ಮೂಲಕ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯೂ ಬೆಳೆಯುತ್ತದೆ. ಒಳ್ಳೆಯ ಸಂಸ್ಕಾರಗಳೊಂದಿಗೆ ಭವಿಷ್ಯದ ಪ್ರಜೆಗಳಾಗುವ ನಮ್ಮ ಮಕ್ಕಳು ಸದೃಢ ಸಮಾಜವನ್ನು ಕಟ್ಟುತ್ತಾರೆ.

ಅಧ್ಯಯನ ಪೀಠದಲ್ಲಿ ಕುಂದಾಪ್ರ ಭಾಷೆಯ ಅಭಿವೃದ್ಧಿಗಾಗಿ ಕೆಲಸ ಮಾಡಿದ ಹಾಗೂ ಮಾಡುತ್ತಿರುವ ಹೆಚ್ಚು ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು ಎನ್ನುವ ಸದುದ್ದೇಶ ಇದ್ದಿದ್ದರೂ, ಪೀಠ ಸ್ಥಾಪನೆಯ ಮಾನದಂಡಕ್ಕೆ ಅನುಗುಣವಾಗಿ ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳಲು ಆಗಿಲ್ಲ. ಆದರೆ ಇದೀಗ ಪೂರ್ಣ ಪೀಠವೇ ಸಾರ್ವಜನಿಕರಿಗೆ ಮುಕ್ತವಾಗಿರುವುದರಿಂದ ಕುಂದಾಪ್ರ ಭಾಷೆಯ ಒಟ್ಟಾರೆ ಬೆಳೆವಣಿಗೆಗೆ ಎಲ್ಲರ ಸಹಕಾರ ಹಾಗೂ ಸಹಾಯದ ಅಗತ್ಯ ಇದೆ ಎಂದರು.

Click here

Click here

Click here

Call us

Call us

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ಮಾತನಾಡುತ್ತಾ, ವಿಶ್ವ ವಿದ್ಯಾಲಯದಲ್ಲಿ ಇರುವ 24 ಪೀಠಗಳಿಗಿಂತಲೂ, ಕುಂದಾಪ್ರ ಕನ್ನಡ ಅಧ್ಯಯನ ಪೀಠ ವಿಭಿನ್ನ ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿದೆ. ಪೀಠದ ಸದಸ್ಯರು ಯಾವುದೇ ಆರ್ಥಿಕ ಪ್ರತಿಫಲ ನಮಗೆ ಬೇಡ ಎನ್ನುವುದನ್ನು ಪ್ರಥಮ ಸಭೆಯಲ್ಲಿಯೇ ದಾಖಲಿಸಿದ್ದಾರೆ. ಇದೇ ಮೊದಲ ಬಾರಿಗೆ ವಿವಿ ಯ ಪೀಠವೊಂದು ಅಧ್ಯಯನ ವ್ಯಾಪ್ತಿಯ ಸ್ಥಳಕ್ಕೆ ಬಂದು ಭಾಷಿಕರೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಿರುವುದು ಅಭಿನಂದನೀಯ.

ಪಾರಂಪರಿಕ ಸಾಹಿತ್ಯಗಳು, ಪದಗಳು, ಹಾಡುಗಳು, ಆಟಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪರಿಕರಗಳು, ಬಳಕೆಯ ಭಾಷೆಗಳು ಎಲ್ಲವೂ ಮುಂದಿನ ಪೀಳಿಗೆಗೆ ಉಳಿಸುವ ಕೆಲಸಗಳು ನಡೆಯಬೇಕು. ಅನ್ಯ ಭಾಷೆಗಳ ಪ್ರಭಾವಗಳಿಂದ, ನಮ್ಮ ಭಾಷೆಯಲ್ಲಿನ ಹಿಂದಿನ ಬಳಕೆಯ ಪದಗಳ ಬದಲಾವಣೆಯಿಂದ ಶ್ರೇಷ್ಠ ಸಂಸ್ಕೃತಿಗಳು ಬದಲಾಗುವ ಅಪಾಯಗಳಿವೆ. ಆಧುನೀಕತೆಯ ಪ್ರಭಾವಕ್ಕೆ ಸಿಲುಕಿ ಎಷ್ಟೋ ಭಾಷೆಗಳು ಅಳಿವಿನ ಸಾಲಿನಲ್ಲಿ ಸೇರ್ಪಡೆಯಾಗಿದೆ, ಉಳಿದಿರುವ ಭಾಷೆಗಳನ್ನು ಜಾಗೃತೆಯಾಗಿ ಜೋಪಾನ ಮಾಡದೆ ಇದ್ದಲ್ಲಿ, ಕಾಲದ ಸುಳಿಯಲ್ಲಿ ಉಳಿದಿರುವ ಭಾಷೆಗಳು ನಶಿಸಿಹೋಗುವ ಅಪಾಯಗಳಿವೆ ಎಂದರು.

ಹಿರಿಯ ವ್ಯಂಗ್ಯ ಚಿತ್ರಕಾರ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ, ಪಂಜು ಗಂಗೊಳ್ಳಿ ಅವರು ಮಾತನಾಡುತ್ತಾ, ಕುಂದಗನ್ನಡ ಇತ್ತೀಚಿನ ವರ್ಷಗಳಲ್ಲಿ ಬಳಕೆಗೆ ಬಂದ ಪರಿವರ್ತಿತ ಶಬ್ದ. ಈ ಶಬ್ದದ ಉಚ್ಛಾರಣೆಯಲ್ಲಿ ಕುಂದನಗರಿಯಾದ ಬೆಳಗಾವಿಯ ಸಾಮೀಪ್ಯ ಕಾಣಿಸುತ್ತದೆ. ಕುಂದಾಪ್ರ ಕನ್ನಡ ಈ ಭಾಗದ ಅತ್ಯಂತ ಜನಜನಿತವಾದ ಪದಗಳಾಗಿರುವುದರಿಂದ ಅಧ್ಯಯನ ಪೀಠವನ್ನು ‘ ಕುಂದಾಪ್ರ ಕನ್ನಡ ಅಧ್ಯಯನ ಪೀಠ ‘ ಎಂದು ಕರೆಯುವುದೇ ಸೂಕ್ತ ಎಂದರು.

ಹಿರಿಯ ನ್ಯಾಯವಾದಿ ಟಿ.ಬಿ.ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ಖಾರ್ವಿ ಸಮಾಜದ ಪ್ರಮುಖರಾದ ಜಯಾನಂದ ಖಾರ್ವಿ, ಕಲಾಕ್ಷೇತ್ರ ಸಂಘಟನೆಯ ರಾಜೇಶ್ ಕಾವೇರಿ, ಬೀಜಾಡಿ ಮಿತ್ರವೃಂದದ ಚಂದ್ರಶೇಖರ ಬೀಜಾಡಿ ಮುಂತಾದವರು ಇದಕ್ಕೆ ಪೂರಕವಾಗಿ ಮಾತನಾಡಿದರು.

ಪತ್ರಕರ್ತ ಸೋಮಶೇಖರ ಪಡುಕೆರೆ ಮಾತನಾಡಿ, ಚಳಿ ಬಿಟ್ಟು ಭಾಷಾ ಸಂವಹನ ನಡೆಯಬೇಕು. ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ದಾಖಲೀಕರಣವಾಗಬೇಕು. ಕನಿಷ್ಠ ಎರಡು ವಾರಕ್ಕೆ ಒಮ್ಮೆಯಾದರೂ ಶಾಲಾ-ಕಾಲೇಜುಗಳಲ್ಲಿ ಕುಂದಾಪ್ರ ಕನ್ನಡದ ಚಟುವಟಿಕೆಗಳು ನಡೆಯಬೇಕು ಎಂದರು.

ಬಾರ್ಕೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಅವರು ಮಾತನಾಡಿ, ಪೀಠ ಸ್ಥಾಪನೆ ಹಾಗೂ ಸರ್ಕಾರದ ಅನುದಾನದ ಹಿಂದಿರುವ ಕೆ. ಜಯಪ್ರಕಾಶ್ ಹೆಗ್ಡೆ ಅವರ ಪ್ರಯತ್ನ ಶ್ಲಾಘನೀಯ. ಅನೇಕ ಪೀಠಗಳು ಕೇವಲ ಹೆಸರಿಗಾಗಿ ಪೀಠಗಳಾಗಿ ಉಳಿಯುತ್ತದೆ. ಆದರೆ ಈ ಪೀಠ ಹಾಗಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಸಣ್ಣ ಸಣ್ಣ ಭಾಷೆಗಳನ್ನು ಜೀವಂತವಾಗಿ ಉಳಿಸುವುದು ಕೂಟ ಅತ್ಯಂತ ಕಷ್ಟದ ಕೆಲಸ. ಕುಂದಾಪ್ರ ಭಾಷೆ ಹೆಚ್ಚು ಸಂವಹನದಿಂದ ವ್ಯಾಪ್ತಿ ಹಾಗೂ ಬೆಳವಣಿಗೆಯನ್ನು ವಿಸ್ತರಿಸಿಕೊಳ್ಳುತ್ತದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮಾತನಾಡಿ, ಅಕಾಡೆಮಿ ಅಧ್ಯಯನ ಪೀಠ ಎನ್ನುವ ಬೇಡಿಕೆಗಳ ನಡುವೆ ಸರ್ಕಾರ ಅಧ್ಯಯನ ಪೀಠ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ವಿಚಾರ. ಪೀಠದಿಂದ ಜನರಿಗೆ ಉಪಯೋಗವಾಗುವ ಕೆಲಸಗಳು ನಡೆಯಬೇಕು. ಕುಂದಾಪ್ರ ಕನ್ನಡದ ಹಿರಿಮೆಗಳನ್ನು ಹೇಳುವ ವಿಚಾರಗಳು ಡಿಜಿಟಲಿಕರಣವಾಗುವ ಕೆಲಸ ನಡೆಯಬೇಕು ಎಂದರು.

ರಾಜ್ಯ ಪಂಚಾಯತ್ ರಾಜ್ ತಜ್ಞ ಟಿ.ಬಿ.ಶೆಟ್ಟಿ ಅವರು ಮಾತನಾಡಿ, ಕುಂದಾಪ್ರ ಭಾಷೆಯ ಜೊತೆಗೆ ಇಲ್ಲಿನ ಸಂಸ್ಕೃತಿಯ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಈ ಭಾಗದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿ-ಬೆಳೆಸುವ ಕೆಲಸಗಳು ಆಗಬೇಕು. ಇಲ್ಲಿನ ಚಟುವಟಿಕೆಗಳ ವಿಸ್ತಾರವಾದ ಹಿನ್ನೆಲೆ ಅನಾವರಣವಾದಾಗ ಭಾಷೆಯ ವ್ಯಾಪ್ತಿಯೂ ವಿಶಾಲವಾಗುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಅವರು ಮಾತನಾಡಿ, ಹಳೆಗನ್ನಡ, ಹೊಸಗನ್ನಡ ಎನ್ನುವ ಭಾಷಾ ಪ್ರಯೋಗಗಳಂತೆ ದೀರ್ಘ ಬಳಕೆಯ ಇತಿಹಾಸವಿರುವ ಕುಂದಾಪ್ರ ಕನ್ನಡದ ಪದ ಬಳಕೆಯಲ್ಲಿ ಪ್ರದೇಶವಾರು ವಿಭಿನ್ನತೆಗಳಿವೆ. ಕಾಲದ ಹೊಡೆತಕ್ಕೆ ಸಿಲುಕಿ ಮರೆಯಾಗಿರುವ ಇತರ ಭಾಷೆಗಳಂತೆ ನಮ್ಮ ಭಾಷೆ ಮರೆಯಾಗದಂತೆ, ಉಳಿಸಿ-ಬೆಳೆಸುವ ಕಟಿಬದ್ಧತೆ ನಮ್ಮಲ್ಲಿ ಇರಬೇಕು ಎಂದರು.

ಬೈಂದೂರು ತಾಲೂಕು ಭಾರತ್ ಸೇವಾದಳ ಸಂಘಟನೆಯ ಅಧ್ಯಕ್ಷ ಶರತ್‌ಕುಮಾರ ಶೆಟ್ಟಿ ಉಪ್ಪುಂದ ಅವರು ಮಾತನಾಡಿ, ಅತ್ಯಂತ ಪ್ರಬುದ್ಧತೆ ಹಾಗೂ ಆಂತರ್ಯದ ಸ್ಪಂದನ ಇರುವ ನಮ್ಮ ಕುಂದಾಪ್ರ ಭಾಷೆಯ ಉಳಿವಿಗಾಗಿ ವಿದ್ಯಾರ್ಥಿಗಳಿಗೆ ಭಾಷೆಗೆ ಪೂರಕವಾದ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ಕೃಷಿ ಚಟುವಟಿಕೆಗಳಲ್ಲಿದೊರಕವು ಸಾಕಷ್ಟು ಪರಿಭಾಷಿಕ ಶಬ್ದಗಳನ್ನು ಸಂಗ್ರಹಿಸಿ ಇಡುವ ಕೆಲಸ ಆಗಬೇಕು. ಪಾರಂಪರಿಕ ಹಾಡುಗಳ ವಿಶ್ಲೇಷಣೆಯ ಜೊತೆ, ಬಳಕೆಯಾದ ಪದಗಳ ಅರ್ಥವನ್ನು ಜೋಪಾನ ಮಾಡುವ ಕೆಲಸ ಆಗಬೇಕು. ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೂ ಕುಂದಾಪ್ರ ಭಾಷೆ ಅಧ್ಯಯನ ಯೋಗ್ಯವಾದ ವಿಷಯವಾಗಬೇಕು. ಹೊಸ ಭಾಷೆ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಗದಂತೆ ನಮ್ಮ ಭಾಷೆಯನ್ನು ರಕ್ಷಣೆ ಮಾಡುವ ಯೋಧರು ನಾವಾಗಬೇಕು ಎಂದರು.

ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯೆ ಡಾ.ರೇಖಾ ಬನ್ನಾಡಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಹಟ್ಟಿಯಂಗಡಿ ಯಕ್ಷಗಾನ ಮೇಳದ ಯಜಮಾನರಾದ ವಕ್ವಾಡಿ ರಂಜಿತ್‌ಕುಮಾರ ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಾನಂದ ಬೈಂದೂರು, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಕಲಾಚಿಗುರು ಸಂಸ್ಥೆಯ ಚೇತನ್ ನೈಲಾಡಿ ಅಭಿಪ್ರಾಯ ಮಂಡಿಸಿದರು.

ಮಂಗಳೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸಂಯೋಜಕ ಡಾ.ನಾಗಪ್ಪ ಗೌಡ ಇದ್ದರು.

ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ರಾಜೇಶ್ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ್‌ಕುಮಾರ ಶೆಟ್ಟಿ ಪಡುಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply