ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ರಾಮನವಮಿಯ ಪರ್ವಕಾಲವಾದ ಭಾನುವಾರದಂದು ಶಾಲಾ ಸಂಸ್ಥಾಪಕರಾದ ದಿ. ವೇದಮೂರ್ತಿ ರಾಮಚಂದ್ರ ಭಟ್ಟರ ಧರ್ಮಪತ್ನಿಯವರಾದ ರಮಾದೇವಿ ಆರ್ ಭಟ್ ಅವರು ತಮ್ಮ ಅಮೃತಹಸ್ತದಿಂದ ನೂತನ ವಸತಿನಿಲಯದ ನಿರ್ಮಾಣಕ್ಕಾಗಿ ಭೂಮಿಪೂಜೆಯನ್ನು ನಡೆಸಿದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಆಡಳಿತಕ್ಕೆ ಒಳಪಟ್ಟ ಈ ಶಾಲೆಯಲ್ಲಿ ಕಳೆದೆರಡು ಮೂರು ವರ್ಷಗಳಿಂದ ದಾಖಲಾತಿಗೆ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಶಾಲೆಯ ವಸತಿನಿಲಯದಲ್ಲಿ ಅವಕಾಶ ಕಡಿಮೆ ಇರುವುದರಿಂದ ದಾಖಲಾತಿ ಬಯಸುವ ವಿದ್ಯಾರ್ಥಿಗಳು ನಿರಾಸೆಯಿಂದ ಹಿಂತಿರುಗುತ್ತಿರುವುದನ್ನು ಮನಗಂಡು ಆಡಳಿತಮಂಡಳಿ ನೂತನವಾಗಿ ವಸತಿನಿಲಯದ ಸಂರಚನೆಗೆ ಭೂಮಿಪೂಜೆಯ ಮೂಲಕ ಅಡಿಯನ್ನಿರಿಸಿದೆ.
ಈ ಶುಭಾವಸರದಲ್ಲಿ ಶಾಲಾ ಪ್ರಾಂಶುಪಾಲರು ಹಾಗೂ ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶರಣಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.










