ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಮುಸ್ಲಿಂ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪ್ರಶ್ನಿಸಿದಾತನ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಹಿಂದೂ ಕಾರ್ಯಕರ್ತರು ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋರಾತ್ರಿ ಧರಣಿ ಕುಳಿತ ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆಗೆ ಸಂಬಂಧಿಸಿ ಸೇನಾಪುರದ ಮಹೇಶ್ ಮುಸ್ಲಿಂ ಯುವಕರ ನಡುವೆ ಗಲಾಟೆ ನಡೆದಿದೆ. ಕುಂದಾಪುರ ಪೊಲೀಸರು ಸಾರ್ವಜನಿಕ ಜಾಗದಲ್ಲಿ ಶಾಂತಿ ಭಂಗ ಎನ್ನುವ ಕಾರಣಕ್ಕೆ ಸೊಮೋಟೋ ಪ್ರಕರಣ ದಾಖಲಿಸಿದ್ದರು. ಬಳಿಕ ಮಂಗಳವಾರ ಹಿಂದೂ ಯುವತಿಯ ತಾಯಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ನೀಡಿದ್ದು, ದೂರಿನಲ್ಲಿ ತನ್ನ ಮಗಳಿಗೆ ಆರೋಪಿ ಮಹೇಶ್ ಮಾನ ಹಾನಿ ಮಾಡಿದ್ದಾನೆ ಎಂದು ತಿಳಿಸಿದ್ದು, ಮಹೇಶ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಎಲ್ಲಾ ಘಟನೆಗೆ ಸಂಬಂಧಿಸಿದಂತೆ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋ ರಾತ್ರಿ ಧರಣಿ ನಡೆಸಲು ಮುಂದಾಗಿದ್ದು, ವಿದ್ಯಾರ್ಥಿನಿಯ ತಾಯಿ ಕುಂದಾಪುರ ಪೊಲೀಸ್ ಠಾಣೆಗೆ ಬಂದು ಮತ್ತೊಂದು ದೂರು ನೀಡಿದ್ದಾರೆ. ತನ್ನ ಮಗಳು ಬಸ್ಸಿನಲ್ಲಿ ಬರುತ್ತಿದ್ದಾಗ ಮುಸ್ಲಿಂ ಯುವಕರು ಕಿರುಕುಳ ನೀಡಿದ್ದು ಅವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ಪ್ರಶ್ನಿಸಿದ ಮಹೇಶ್ ನನ್ನು ಬಿಡುಗಡೆಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಹೋರಾತ್ರಿ ಧರಣಿ ಕುಳಿತ ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಧಮನಿಸುವ ಕಾರ್ಯಕ್ಕೆ ಪೊಲಿಸರು ಬಳಿಸಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಲವ್ ಜಿಹಾದ್, ಗೋಹತ್ಯೆ, ಅಕ್ರಮ ಗೋ ಸಾಗಾಟಗಳಂತಹಾ ಪ್ರಕರಣಗಳು ಹೆಚ್ಚುತ್ತಿವೆ. ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಹಿಂದೂಗಳನ್ನು ಧಮನಿಸುವ ಕೆಲಸಕ್ಕೆ ಕೈ ಹಾಕಿದರೆ ಹಿಂದೂ ಸಂಘಟನೆಗಳು ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು. ಹಿಂದು ಯುವತಿಯನ್ನು ಚುಡಾಯಿಸಿದ ಮುಸ್ಲಿಂ ಯುವಕರನ್ನು ಬಂಧಿಸಿ ಕ್ರಮ ಕೈಗೊಳ್ಳುವವರೆಗೆ ಆಹೋರಾತ್ರಿ ಧರಣಿ ಮುಂದುವರೆಸುವುದಾಗಿಯೂ ಎಚ್ಚರಿಸಿದ್ದಾರೆ.
ಈ ವೇಳೆ ಸಂಘ ಪರಿವಾರದ ಮುಖಂಡರುಗಳಾದ ಸುರೇಶ್ ಬಟವಾಡಿ, ಶಂಕರ ಅಂಕದಕಟ್ಟೆ ಬೈಂದೂರು ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಬೆಲೆಮನೆ, ಜಗದೀಶ್ ಕೊಲ್ಲೂರು, ರತ್ನಾಕರ ಕುಂದಾಪುರ ಸೇರಿದಂತೆ ಹಲವರು ಜೊತೆಗಿದ್ದರು.















