ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಹಿಂದು ಸಮಾಜದ ಹೆಣ್ಣು ಮಕ್ಕಳನ್ನು ಮೋಸದ ಜಾಲಕ್ಕೆ ಬೀಳಿಸುತ್ತಿರುವ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿದೆ. ಲವ್ ಜಿಹಾದ್ ಜಾಲಕ್ಕೆ ಸಿಲುಕಿದ ಅದೆಷ್ಟೋ ಹೆಣ್ಣು ಮಕ್ಕಳು, ಮಹಿಳೆಯರು ತಮ್ಮ ಜೀವವನ್ನೇ ಕಳೆದುಕೊಂಡರೆ, ಅನೇಕರು ಈ ಜಾಲದಿಂದ ಹೊರಬರಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಹಿಂದು ಸಮಾಜದ ಹೆಣ್ಣು ಮಕ್ಕಳು ಹಾಗೂ ಮಾತೆಯರಿಗೆ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಅವರು ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಎಸ್.ವಿ. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜರಗಿದ ಕಿಶೋರಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದು ಸಮಾಜದ ಯುವ ಜನರಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಬಾಲ್ಯದಿಂದಲೇ ಸರಿಯಾದ ಸಂಸ್ಕಾರ ನೀಡಿದರೆ, ಅವರು ತಪ್ಪು ದಾರಿ ಹಿಡಿಯದಂತೆ ಮಾರ್ಗದರ್ಶನ ನೀಡಿದರೆ ಇಂತಹ ದುಷ್ಟ ಶಕ್ತಿಗಳನ್ನು ಸೆದೆಬಡಿಯಲು ಸಾಧ್ಯ. ಸಮಾಜದ ಹೆಣ್ಣು ಮಕ್ಕಳು ಜಾಗೃತಗೊಂಡು ಯಾವುದೇ ಆಸೆ ಆಮಿಷಗಳಿಗೆ, ಪ್ರೀತಿ, ಪ್ರೇಮದ ಮೋಸದ ಆಟಗಳಿಗೆ ಬಲಿಯಾಗದೆ ಸನ್ಮಾರ್ಗದಲ್ಲಿ ಮುನ್ನಡೆದು ಸಂಸ್ಕಾರಯುತ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಮಾಜಿಕ ಕಾರ್ಯಗಾರ ಗಣರಾಜ್ ಭಟ್ ಕೆದಿಲ ಅವರು ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ ಪಿಡುಗುಗಳ ಬಗ್ಗೆ ಮತ್ತು ಲವ್ ಜಿಹಾದ್ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಶು ಮಂದಿರದ ಮಾಜಿ ಅಧ್ಯಕ್ಷೆ ಸವಿತಾ ಯು. ದೇವಾಡಿಗ ಮಾತನಾಡಿದರು. ಕುಂದಾಪುರ ಸೇವಾ ಸಂಗಮ ಟ್ರಸ್ಟ್ ಕಾರ್ಯದರ್ಶಿ ಚಂದ್ರಿಕಾ ಧನ್ಯ, ಟ್ರಸ್ಟಿ ಕಲ್ಪನಾ ಭಾಸ್ಕರ, ಶಿಶು ಮಂದಿರದ ಕಾರ್ಯದರ್ಶಿ ಅಶ್ವಿತಾ ಜಿ.ಪೈ, ಶ್ರೀನಿವಾಸ ಎಂ., ವಿಜಯಶ್ರೀ ವಿ.ಆಚಾರ್ಯ, ವಸಂತಿ ಎನ್.ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ಮಾತಾಜಿ ರತ್ನ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಬಿ. ರಾಘವೇಂದ್ರ ಪೈ ಸ್ವಾಗತಿಸಿದರು.