ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಕೆಯಾಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆಯಾಗುತ್ತದೆ, ಸಗಣಿಗೆ ಸಂಸ್ಕಾರ ಕೊಟ್ಟರೆ ವಿಭೂತಿಯಾಗುತ್ತದೆ, ಮಕ್ಕಳಿಗೆ ಸಂಸ್ಕಾರ ಕೊಟ್ಟರೆ ಮಹಾದೇವನಾಗುತ್ತಾನೆ ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಐತಾಳ್ ಹೇಳಿದರು.
ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಕೋಟ ಮೂರ್‌ಕೈಯ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಎರಡು ದಿವಸಗಳ ಆಹ್ವಾನಿತ ತಂಡಗಳ ’ಯಕ್ಷ ತ್ರಿವಳಿʼ ಯಕ್ಷೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಬದುಕಿನ ಮೌಲ್ಯವನ್ನು ಕೊಡ ಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಮಗುವನ್ನು ತಾಯಿಯಂತೆ ಪೋಷಿಸಬಲ್ಲ ಶಕ್ತಿ ಯಕ್ಷಗಾನದ ನಿಜ ಸತ್ವವಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಂದೆ ಉಡುಪರು ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ ಅಲ್ಲದೆ ಯಕ್ಷಗಾನವನ್ನು ವಿಶ್ವಗಾನವಾಗಿಸಿದ ಕೀರ್ತಿ ಎಚ್. ಶ್ರೀಧರ ಹಂದೆಯವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಯಕ್ಷ ಗುರು ಶ್ರೀಧರ ಹೆಬ್ಬಾರ್ ಅವರನ್ನು ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಯಕ್ಷ ವಿಮರ್ಶಕ ಬೇಳೂರು ರಾಘವ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಹಂದೆ ದೇವಳದ ಆನುವಂಶಿಕ ಮೊಕ್ತೇಸರ ಅಮರ ಹಂದೆ, ಯಕ್ಷ ಸಂಘಟಕ ಸುದರ್ಶನ ಉರಾಳ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ, ಟ್ರಸ್ಟಿ ಶ್ರೀಕಾಂತ ಉಡುಪ ಉಪಸ್ಥಿತರಿದ್ದರು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಸ್ವಾಗತಿಸಿದರು. ಮಕ್ಕಳ ಮೇಳದ ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ಯಕ್ಷ ಆರಾಧನಾ ಕಿದಿಯೂರು ಅವರಿಂದ ಕೆ.ಜೆ. ಗಣೇಶ್ ನಿರ್ದೇಶನದಲ್ಲಿ ಶಶಿಪ್ರಭಾ, ಬಳಿಕ ಮಯೂರ ಕಲಾ ಪ್ರತಿಷ್ಠಾನ ಮಂಗಳೂರು ತಂಡದಿಂದ ರಕ್ಷಿತ್ ಪಡ್ರೆ ಅವರ ನಿರ್ದೇಶನದಲ್ಲಿ ’ಶರಣ ಸೇವಾ ರತ್ನʼ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.















