ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದ್ದದ್ದು. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಯಕ್ಷಗಾನ ಜನರಿಂದ ದೂರವಾಗುತ್ತಿದೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ಆದರೆ ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೂ ದೊಡ್ಡ ಶ್ರೋತೃವರ್ಗ ಇರುವುದು ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ ಎಂದು ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.
ಅವರು ಲಾವಣ್ಯ ಬೈಂದೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ, ತಾಳಮದ್ದಳೆ, ಹೋವಿನಕೋಲು ಮುಂತಾದವುಗಳು ನಮ್ಮ ಪರಂಪರೆಯ ಭಾಗವಾಗಿದ್ದು ಮಹಾ ಕಾವ್ಯಗಳನ್ನು ಜನರಿಗೆ ತಲುಪಿಸುವ ಉತ್ತಮ ಮಾಧ್ಯಮವಾಗಿದೆ. ಹಿಂದಿನ ಪರಂಪರೆಯ ಪ್ರದರ್ಶನಗಳಿಗೆ ಹೋಲಿಸಿದಾಗ ಈಗನವು ಅಂತ:ಸತ್ವ ಕಲೆದುಕೊಂಡಿವೆ ಎಂಬ ಟೀಕೆ ಇದೆ. ಆದರೆ ಕಾಲದ ಆಘಾತಗಳನ್ನು ತಡೆದು ನಿಲ್ಲುವ ಶಕ್ತಿ ಸತ್ವಭರಿತ ಕಲೆಯಾದ ಯಕ್ಷಗಾನಕ್ಕಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಲಾವಣ್ಯದ ಅಧ್ಯಕ್ಷ ನರಸಿಂಹ ಬಿ. ನಾಯಕ್, ಹಿರಿಯ ರಂಗ ಕಲಾವಿದ ಬಿ. ಗಣೇಶ ಕಾರಂತ್, ವೃತ್ತ ನಿರೀಕ್ಷಕ ಸವಿತ್ರತೇಜ, ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಯಡ್ತರೆ, ಕಾರ್ಯದರ್ಶಿ ಚಂದ್ರ ಯಡ್ತರೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ರಾಘವೇಂದ್ರ ಬಿ. ಕೆ. ಉಪಸ್ಥಿತರಿದ್ದರು.
ನಂತರ ಖ್ಯಾತ ಕಲಾವಿದರಿಂದ ಅಂಗದ ಸಂಧಾನ ಹಾಗೂ ಮಾಗಧ ವಧೆ ಯಕ್ಷಗಾನ ತಾಳಮದ್ದಲೆ ನಡೆಯಿತು.















