ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿಕ್ಷಣದೊಂದಿಗೆ ಸಂಸ್ಕಾರ ದೊರೆತಾದ ಯಾವುದೇ ಮುಗು ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಲು ಸಾಧ್ಯವಿದೆ. ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸುವ ಜೊತೆಗೆ ಸಂಸ್ಕಾರದ ಪಾಠವನ್ನು ಅಗತ್ಯವಾಗಿ ಕಲಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ ಎಂದು ಉದ್ಯಮಿ ಸದಾನಂದ ಪ್ರಭು ಹೇಳಿದರು.
ಅವರು ಸೋಮವಾರ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಬಳಿಕ ಮಾತನಾಡಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ನೆರವು ನೀಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಪದವಿಯ ತನಕದ ವಿದ್ಯಾರ್ಥಿಗಳಿಗೆ ಈ ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಳೆದ ಎರಡೂವರೆ ದಶಕದೀಂದ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಕುಟೀರದ ಮೂಲಕ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಲಾಗಿತ್ತು. ದಾನಿಗಳ ನೆರವಿನಿಂದ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದರು.
ಈ ವೇಳೆ ಉದಯ ಪ್ರಭು ಭಟ್ಕಳ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಶಿಕ್ಷಕ ಚಂದ್ರ ಕೊಠಾರಿ ಎನ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಜ್ಯೋತಿ ಹೆಚ್. ಎಸ್ ವಂದಿಸಿದರು. ಕುಟೀರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.